ಸಾರಾಂಶ
ಅನಿರೀಕ್ಷಿತವಾಗಿ ಸುರಿಯುತ್ತಿರುವ ಭಾರೀ ಮಳೆ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಸಮರ್ಥವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಅನಿರೀಕ್ಷಿತವಾಗಿ ಸುರಿಯುತ್ತಿರುವ ಭಾರೀ ಮಳೆ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಸಮರ್ಥವಾಗಿದೆ. ಆದರೂ, ವಿರೋಧ ಪಕ್ಷಗಳು ರಾಜ್ಯದ ಮಾನ ಹರಾಜು ಹಾಕುವುದಕ್ಕೆ ಮುಂದಾಗಿದ್ದು, ಮೊದಲು ಅದನ್ನು ನಿಲ್ಲಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ಸದಾಶಿವನಗರದ ತಮ್ಮ ನಿವಾಸದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕೃತಿಗೆ ಕಡಿವಾಣ ಹಾಕಲು ನಮಗೆ ಸಾಧ್ಯವೇ? ಚಂಡಮಾರುತ ತಡೆಯಲು ನಮ್ಮಿಂದಾಗುತ್ತದೆಯೇ? ಅದನ್ನು ಅರ್ಥ ಮಾಡಿಕೊಳ್ಳದ ವಿರೋಧ ಪಕ್ಷಗಳು ರಾಜ್ಯ ಮಾನ ಹರಾಜು ಹಾಕುವುದಕ್ಕೆ ಮುಂದಾಗಿವೆ. ನಗರದಲ್ಲಿ ಅನಿರೀಕ್ಷಿತವಾಗಿ ಸುರಿಯುತ್ತಿರುವ ಭಾರೀ ಮಳೆ ಪರಿಣಾಮಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಬುಧವಾರವೂ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ಅದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಮಳೆ ಪರಿಸ್ಥಿತಿ ನಿಭಾಯಿಸುವ ಸಂಬಂಧ ಬಿಬಿಎಂಪಿ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಅದಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ ಎಂದರು.