ಡಿಕೆ ಶಿವಕುಮಾರ್ ಗೂ ಸಿಎಂ ಅವಕಾಶ ಸಿಗಲಿ: ರಂಭಾಪುರಿ ಶ್ರೀ

| Published : Jul 06 2025, 11:48 PM IST

ಡಿಕೆ ಶಿವಕುಮಾರ್ ಗೂ ಸಿಎಂ ಅವಕಾಶ ಸಿಗಲಿ: ರಂಭಾಪುರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಏನು ಒಪ್ಪಂದ ಆಗಿದೆ ಅಂತ ಸಿದ್ದರಾಮಯ್ಯ, ಡಿಕೆಶಿ ಹಾಗೂ ವರಿಷ್ಠರಿಗೆ ಮಾತ್ರ ತಿಳಿದಿದ್ದು ಆ ಒಪ್ಪಂದದಂತೆ ನಡೆದುಕೊಂಡರೆ ಎಲ್ಲಾ ರಾಜಕಾರಣಿಗಳಿಗೂ ಗೌರವ.

ಕನ್ನಡಪ್ರಭ ವಾರ್ತೆ ಕನಕಪುರ

ಡಿ.ಕೆ.ಶಿವಕುಮಾರ್‌ ಅವರಿಗೂ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಒಂದು ಅವಕಾಶ ಸಿಗಬೇಕು ಎಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ವೀರ ಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಬಿಜ್ಜಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಧಾರ್ಮಿಕ ಕಾರ್ಯದಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ಈ ಬಗ್ಗೆ ಸಮಾಲೋಚನೆ ನಡೆಸಿ ಒಪ್ಪಂದ ಆಗಿರುವಂತೆ ಡಿಕೆಶಿಗೆ ಅವಕಾಶ ಮಾಡಿ ಕೊಡಬೇಕು. ಏನು ಒಪ್ಪಂದ ಆಗಿದೆ ಅಂತ ಸಿದ್ದರಾಮಯ್ಯ, ಡಿಕೆಶಿ ಹಾಗೂ ವರಿಷ್ಠರಿಗೆ ಮಾತ್ರ ತಿಳಿದಿದ್ದು ಆ ಒಪ್ಪಂದದಂತೆ ನಡೆದುಕೊಂಡರೆ ಎಲ್ಲಾ ರಾಜಕಾರಣಿಗಳಿಗೂ ಗೌರವ. ಈಗಾಗಲೇ ರಾಜ್ಯದ ನಾಯಕತ್ವದ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಮಾತಿನ ಚಕಮಕಿ ನಡೆಯುತ್ತಿದ್ದು, ಇದನ್ನು ರಾಷ್ಟ್ರೀಯ ನಾಯಕರು ತಿಳಿಗೊಳಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದರು.

ರಾಜ್ಯದ ಜನತೆಯ ಕಣ್ಮಣಿ ಡಿಸಿಎಂ ಡಿ.ಕೆ.ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ರಂಭಾಪುರಿ ಪೀಠದ ಬಗ್ಗೆ ಡಿ.ಕೆ.ಶಿವಕುಮಾರ್ ಅವರಿಗೆ ಅಪಾರ ಭಕ್ತಿ, ಶ್ರದ್ಧೆ, ಅಭಿಮಾನವಿದೆ. ದೇವರಲ್ಲಿ, ಧರ್ಮದಲ್ಲಿ, ಧರ್ಮಗುರುಗಳಲ್ಲಿ ಅಪಾರ ನಂಬಿಕೆ ಇಟ್ಟಿದ್ದಾರೆ,.ಅವರ ಮಾತುಗಳನ್ನ ಕೇಳಿದರೆ ಆಧ್ಯಾತ್ಮಿಕ ಒಳತಿರುಳು ಅರಿವಾಗಲಿದೆ. ಇಂತಹ ಅಮೂಲ್ಯ ಮಾತುಗಳನ್ನು ಎಲ್ಲಾ ರಾಜಕಾರಣಿಗಳ ಬಾಯಲ್ಲಿ ಕೇಳಲು ಸಾಧ್ಯವಿಲ್ಲ, ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋದ ವೇಳೆ ಪ್ರಾರ್ಥನೆ ಫಲ ಕೊಡುತ್ತೆ ಎನ್ನುವ ಬಗ್ಗೆ ಅವರ ಮಾತುಗಳ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.

ಪಕ್ಷದ ಅಧ್ಯಕ್ಷಾರಾಗಿ ಕ್ರೀಯಾಶೀಲರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಬಹುಶಃ ಅವರ ಕಾರ್ಯಚಟುವಟಿಕೆಯಿಂದ ಹೆಚ್ಚಿ‌ನ ಬಹುಮತ ಪಕ್ಷಕ್ಕೆ ಸಿಕ್ಕಿದ್ದು ಚುನಾವಣೆ ಬಳಿಕ ಅವರಿಗೆ ಉನ್ನತ ಸ್ಥಾನ ಸಿಗಬೇಕಿತ್ತು. ಆದರೆ ಅವರ ಪಕ್ಷದ ವರಿಷ್ಠರ ತೀರ್ಮಾನದಂತೆ ಡಿಸಿಎಂ ಸ್ಥಾನ ಸ್ವೀಕರಿಸಿ ದೊಡ್ಡತನ ಮೆರೆದಿದ್ದಾರೆ. ಒಡಂಬಡಿಕೆಯಂತೆ ಅವರಿಗೂ ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಮಾಡಿದರೆ, ಆಗ ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಹಾಗೆ ಆಗುತ್ತೆ, ಮುಂದಿನ ದಿನಗಳಲ್ಲಿ ಅವರಿಗೆ ಉತ್ತಮ ಭವಿಷ್ಯ ನಿರ್ಮಾಣವಾಗಿ ಎಲ್ಲಾ ವರ್ಗದ ಸಮುದಾಯದ ಹಿತ ಕಾಪಾಡುವ ಕೆಲಸ ಮಾಡಲಿ ಎಂದು ಹಾರೈಸಿದರು.

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು ಉತ್ತಮ ಕೆಲಸವಾಗಿದ್ದರೂ ಈ ಯೋಜನೆ ಸಮರ್ಪಕವಾಗಿ ಜನತೆಗೆ ತಲುಪುತ್ತಿಲ್ಲ, ಅಲ್ಲದೇ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗ್ತಿಲ್ಲ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿರುವುದರಿಂದ ಪಂಚ ಗ್ಯಾರಂಟಿ ಜೊತೆಗೆ ರಾಜ್ಯದ ಅಭಿವೃದ್ಧಿ ಬಗ್ಗೆಯೂ ರಾಜ್ಯ ಸರ್ಕಾರ ಚಿಂತನೆ ಮಾಡುವಂತೆ ಸಲಹೆ ನೀಡಿದರು.

ರಾಜಕೀಯ ವಿಚಾರವಾಗಿ ನಾವು ಹೆಚ್ಚು ಮಾತನಾಡಲ್ಲ, ಆದರೆ, ನಿರ್ಣಯ ಆಗಿರುವಂತೆ ನಡೆದುಕೊಂಡರೆ ಈಗಿರುವ ಸಿಎಂ ಹಾಗೂ ರಾಷ್ಟ್ರೀಯ ನಾಯಕರಿಗೆ ಗೌರವ. ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟಪಟ್ಟಿರುವ ಡಿ.ಕೆ.ಶಿವಕುಮಾರ್ ಅವರಿಗೂ ಸಮಾಧಾನ ಆಗಲಿದೆ. ಈಗಾಗಲೇ ಕೆಲವು ಜನ ಅಧ್ಯಕ್ಷ ಸ್ಥಾನ ತ್ಯಾಗ ಮಾಡಬೇಕು ಅಂತ ಹೇಳುತ್ತಿದ್ದು ಎಲ್ಲಿಯವರೆಗೆ ಡಿಕೆಶಿಗೆ ಸಿಎಂ ಸ್ಥಾನ ಸಿಗಲ್ವೋ, ಅಲ್ಲಿಯವರೆಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಿ ಅಂತ ಹೈಕಮಾಂಡ್ ನಾಯಕರು ಹೇಳಬಾರದು. ಅವರಿಗೆ ಸಿಎಂ ಸ್ಥಾನ ಸಿಕ್ಕಿದ್ರೆ ಈ ಅಧ್ಯಕ್ಷ ಸ್ಥಾನ ಬಿಟ್ಟಿಕೊಡುತ್ತಾರೆ. ಅದನ್ನು ರಾಷ್ಟ್ರೀಯ ನಾಯಕರು ನಿರ್ಣಾಯಕವಾಗಿ ಹೇಳಬೇಕು, ರಾಜಕೀಯದಲ್ಲಿ ರೀತಿ, ನೀತಿ, ನಿಯತ್ತು ಪಾಲಿಸಬೇಕು, ಹಿಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಆದಂತ ಘಟನೆಗಳು ಎಲ್ಲರಿಗೂ ತಿಳಿದಿದ್ದು ಅಂತಹ ಘಟನೆ ಮತ್ತೆ ಮರುಕಳಿಸದಂತೆ ತೀರ್ಮಾನ ತೆಗೆದುಕೊಳ್ಳಲಿ ಎಂಬುದು ನಮ್ಮ ಆಶಯ ಎಂದರು.