ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ರಾಜ್ಯದ ಸರ್ಕಾರ ಮುಸ್ಲಿಂ ಪರವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆ, ಸಂವಿಧಾನಕ್ಕೆ ಅಪಚಾರ ಮಾಡಿದಂತಿದ್ದು, ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಮಾಡಿರುವ ಪ್ರಮಾಣವನ್ನು ಮೂಲೆಗೆ ತಳ್ಳಿದಂತಾಗಿದೆ ಎಂದು ಮಾಜಿ ಸಭಾಪತಿ, ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ ಕಟುವಾಗಿ ಟೀಕಿಸಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಸರ್ಕಾರ ಎಂದ ಮೇಲೆ ಎಲ್ಲ ಜಾತಿ ಧರ್ಮಗಳ ಪರವಾಗಿರಬೇಕು. ಅದರಲ್ಲಿ ಉಪಮುಖ್ಯಮಂತ್ರಿಯಾಗಿದ್ದುಕೊಂಡು ಸರ್ಕಾರ ಮುಸ್ಲಿಂ ಪರ ಎಂದು ಹೇಳಿಕೆ ನೀಡುತ್ತಿರುವದು ಅತ್ಯಂತ ಬೇಸರ ತರಿಸುವಂಥದ್ದು. ಅಷ್ಟಕ್ಕೂ ಈಗಲಾದರೂ ಡಿ.ಕೆ ಶಿವಕುಮಾರ್ ಅವರು ಸತ್ಯ ಬಾಯಿ ಬಿಟ್ಟಿದ್ದಾರೆ. ಅವರಿಗೆ ತುಷ್ಟ್ಟೀಕರಣದ ರಾಜಕಾರಣ ಮಾಡಿ ರೂಢಿ ಇದ್ದು, ಒಂದು ಸಮುದಾಯಕ್ಕೆ ಎತ್ತಿ ಹಿಡಿಯುವ ಮೂಲಕ ಸಂವಿಧಾನ ವಿರೋಧಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಹಾಗೂ
ಕಾಂಗ್ರೆಸ್ ಸರ್ಕಾರದ ಯುಪಿಎ ಆಡಳಿತಾವಧಿಯಲ್ಲಿ ಆಕಾಶ, ಭೂಮಿ ಹಾಗೂ ಪಾತಾಳದಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿತ್ತು, ನಗ್ನ ನರ್ತನದಂತಿತ್ತು. ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರ ಇರಲಿ, ಒಂದು ಕಪ್ಪು ಚುಕ್ಕೆ ಬರುವಂಥ ಯಾವುದೇ ಕೆಲಸ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.ರಾಜ್ಯದಲ್ಲಿ ಬರ ಘೋಷಣೆಯಾಗಿ ಸುಮಾರು 3 ತಿಂಗಳಾದರೂ ಒಂದೂ ಬರ ನಿರ್ವಹಣೆಯ ಕಾಮಗಾರಿಯನ್ನು ಸರ್ಕಾರ ಚಾಲನೆ ನೀಡಿಲ್ಲ. ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ನಿಂತು ಹೋಗಿವೆ. ಒಂದೇ ಒಂದು ಹೊಸ ಕಾಮಗಾರಿ ಆರಂಭ ಕಂಡಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಬೊಕ್ಕಸ ಖಾಲಿ ಮಾಡಿಕೊಂಡಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 5 ಗ್ಯಾರಂಟಿಗಳನ್ನು ಉಳಿಸಿಕೊಂಡು ಹೋದ್ರೆ ಸಾಕಾದಂತಿದೆ. ಇದು ಚುನಾವಣೆಯ ನಂತರ ಮುಂದುವರಿಯುವ ಸಾಧ್ಯತೆಗಳೀಗ ಕ್ಷೀಣವಾಗಿವೆ ಎಂದು ಅನುಮಾನ ವ್ಯಕ್ತಪಡಿಸಿದರು.