ಏಪ್ರಿಲ್‌-ಮೇನಲ್ಲಿ ಕಾವೇರಿ 5ನೇ ಹಂತದ ಮೂಲಕ ನೀರು ಸರಬರಾಜು ಮಾಡಲಿದ್ದು, ನೀರಿಲ್ಲದ ಕೊಳವೆ ಬಾವಿ ರೀ ಡ್ರಿಲ್ಲಿಂಗ್‌ಗೆ ಆದೇಶ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ವಿಧಾನಸಭೆ

ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಬತ್ತಿ ಹೋಗಿರುವ ಅಥವಾ ನೀರಿನ ಪ್ರಮಾಣ ಕಡಿಮೆಯಾಗಿರುವ ಕೊಳವೆ ಬಾವಿಗಳನ್ನು ರೀ ಡ್ರಿಲ್ಲಿಂಗ್‌ ಮಾಡಲು ಆದೇಶಿಸಲಾಗಿದೆ. 

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಬರುವ ಏಪ್ರಿಲ್‌-ಮೇ ವೇಳೆಗೆ ಕಾವೇರಿ 5ನೇ ಹಂತದ ಮೂಲಕ ನೀರು ಸರಬರಾಜು ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯರಾದ ಬೈರತಿ ಬಸವರಾಜು, ಮುನಿರಾಜು, ಎಸ್‌.ಟಿ.ಸೋಮಶೇಖರ್‌ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆದ ಡಿ.ಕೆ.ಶಿವಕುಮಾರ್‌, ಬೆಂಗಳೂರು ನಗರಕ್ಕೆ ಹಂಚಿಕೆಯಾಗಿರುವ ಕಾವೇರಿ ನೀರನ್ನು ಬೇಸಿಗೆಯಲ್ಲಿ ಫೆಬ್ರವರಿಯಿಂದ ಜುಲೈವರೆಗೆ ಒಟ್ಟು 11.24 ಟಿಎಂಸಿ ನೀರನ್ನು ಜಲಾಶಯದಲ್ಲಿ ಶೇಖರಿಸಿ ಸರಬಾಜು ಮಾಡಲು ಕಾವೇರಿ ನೀರಾವರಿ ನಿಗಮವನ್ನು ಕೋರಲಾಗಿದೆ. 

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಿಗೆ ಕಾವೇರಿ 5ನೇ ಹಂತದ ಕಾಮಗಾರಿ ಹಾಗೂ ಲೆಕ್ಕಕ್ಕೆ ಸಿಗದ ನೀರಿನ ನಿಯಂತ್ರಣ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 

ಈ ಪೈಕಿ ಈಗಾಗಲೇ 51 ಹಳ್ಳಿಗಳಿಗೆ ನೀರಿನ ಲಭ್ಯಗೆ ಮೇಲೆ ಸರಬರಾಜು ನಡೆಯುತ್ತಿದೆ. ಉಳಿದ ಎಲ್ಲ ಹಳ್ಳಿಗಳಿಗೂ ಬರುವ ಏಪ್ರಿಲ್‌-ಮೇ ನಿಂದ ಕಾವೇರಿ ನೀರು ಪೂರೈಕೆ ಮಾಡಲಾಗುವುದು ಎಂದರು.

ಇನ್ನು ಕಳೆದ ವರ್ಷ ಬೆಂಗಳೂರಿಗೆ ಶೇ.40ರಷ್ಟು ಮಳೆ ಕೊರತೆಯಾಗಿದ್ದು ಇದರಿಂದ ಬೆಂಗಳೂರು ಜಲಮಂಡಳಿ ವ್ಯಾಪ್ತಿಯ ಸುಮಾರು 11 ಸಾವಿರ ಕೊಳವೆ ಬಾವಿಗಳಲ್ಲಿ ಸಾಕಷ್ಟು ಅಂತರ್ಜಲ ಕುಸಿದಿದೆ. 

ಈ ಕೊಳವೆ ಬಾವಿಗಳಗಳ ನಿರ್ವಹಣೆಗೆ ಬೇಕಾದ ಸಾಮಗ್ರಿಗಳನ್ನು ಕೇಂದ್ರ ಉಗ್ರಾಣದಲ್ಲಿ ಅಗತ್ಯ ಪ್ರಮಾಣದಲ್ಲಿ ಶೇಕರಿಸಲಾಗಿದೆ. 

ಪೈಕಿ ಬತ್ತಿ ಹೋಗಿರುವ ಹಾಗೂ ನೀರಿನ ಒರತೆ ಕಡಿಮೆಯಾಗಿರುವ ಕೊಳವೆ ಬಾವಿಗಳನ್ನು ರೀ ಡ್ರಿಲ್ಲಿಂಗ್‌ ಮಾಡಲು ಆದೇಶಿಸಲಾಗಿದ್ದು ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. 

ಹೆಚ್ಚಿನ ನೀರಿನ ಬವಣೆ ಇರುವ ಪ್ರದೇಶಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸುವ ಉದ್ದೇಶವೂ ಇದೆ. ಇನ್ನು ಜಲಮಂಡಳಿಯ ಒಟ್ಟು 68 ನೀರಿನ ಟ್ಯಾಂಕರ್‌ಗಳು ಸುಸ್ಥಿತಿಯಲ್ಲಿದ್ದು ನೀರನ ಬವಣೆ ಇರುವ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ವಿವರಿಸಿದರು.

ಜಲಮಂಡಳಿಯಲ್ಲಿ ಸಂಬಳಕ್ಕೂ ದುಡ್ಡಿಲ್ಲ: ವರ್ಷದಿಂದ ವರ್ಷಕ್ಕೆ ನೀರು ಪೂರಕೆಗೆ ಸಂಬಂಧಿಸಿದ ಕಾಮಗಾರಿಗಳು, ನಿರ್ವಹಣೆ ವೆಚ್ಚ ಹೆಚ್ಚುತ್ತಲೇ ಇರುತ್ತದೆ. 

ಆದರೆ, 2003ರಿಂದ ರಾಜಕೀಯ ಕಾರಣಗಳಿಗೆ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಿಸಲು ಬಿಟ್ಟಿಲ್ಲ. ಇದರಿಂದ ಬಿಡಬ್ಲ್ಯುಎಸ್‌ಎಸ್‌ಬಿಯಲ್ಲಿ ನೌಕರರಿಗೆ ಸಂಬಳ ನೀಡಲೂ ಹಣ ಇಲ್ಲದ ಸ್ಥಿತಿ ಬಂದಿದೆ ಎಂದು ಇದೇ ವೇಳೆ ಅವರು ಹೇಳಿದರು.

ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಕೊಳವೆ ಬಾವಿಗಳ ರಿ ಡ್ರಿಲ್ಲಿಂಗ್‌ಗೆ ಅವಕಾಶ ನೀಡಿದರೆ ಸಾಲದು. ಅವುಗಳಲ್ಲಿ ನೀರು ಸಿಗದಿದ್ದಾಗ ಏನು ಮಾಡಬೇಕು. 

ಹಾಗಾಗಿ ತಕ್ಷಣ ಹೊಸ ಕೊಳವೆ ಬಾವಿ ಕೊರೆಯಲು ಕೂಡ ಅನುಮತಿ ನೀಡಬೇಕು. ಹೊಸದಾಗಿ ಬೋರ್‌ವೆಲ್‌ ಕೊರೆಯಲು ಕೆಲ ನಿಬಂಧನೆಗಳಿವೆ. ಅವುಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.