ಸಾರಾಂಶ
ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಮುಂದಿನ ದಿನಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಕುರ್ಚಿ ಪ್ರಸಾದದ ರೂಪದಲ್ಲಿ ಸಿಕ್ಕೇ ಸಿಗುತ್ತದೆ ಎಂದು ಕೋಲಾರ ಕ್ಷೇತ್ರ ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯಿಸಿದರು.
ರಾಮನಗರ : ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಮುಂದಿನ ದಿನಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಕುರ್ಚಿ ಪ್ರಸಾದದ ರೂಪದಲ್ಲಿ ಸಿಕ್ಕೇ ಸಿಗುತ್ತದೆ ಎಂದು ಕೋಲಾರ ಕ್ಷೇತ್ರ ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿರವರು ಈ ಅವಧಿಗೆ ಸಿಎಂ ಆಗುತ್ತಾರೊ, ಮುಂದಿನ ಅವಧಿಗೆ ಆಗುತ್ತಾರೊ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಮಗೆ ಸಿದ್ದರಾಮಯ್ಯ ಬೇರೆ ಅಲ್ಲ, ಡಿ.ಕೆ. ಶಿವಕುಮಾರ್ ಅವರು ಬೇರೆ ಅಲ್ಲ. ಯಾರಿದ್ದರೂ ನಮಗೆ ಸಂತೋಷ. ಖಂಡಿತವಾಗಿಯೂ ಮುಂದೆ ಡಿಕೆಶಿ ಅವರಿಗೆ ಅವಕಾಶ ಸಿಗುತ್ತದೆ ಎಂದರು.
ನಾನು 2013ರಲ್ಲಿ ಶಾಸಕನಾಗಿದ್ದೆ. 2018ರಲ್ಲಿ ನನ್ನ ಅರ್ಜಿ ರಿಜೆಕ್ಟ್ ಆಯಿತು. ಇದೀಗ ನಾನು ಮತ್ತೆ ಶಾಸಕ ಆಗಿದ್ದೇನೆ. ನಾನು ತಾಳ್ಮೆಯಿಂದ ಕಾಯ್ದಿದ್ದಕ್ಕೆ ನನಗೆ ಪ್ರಸಾದ ಸಿಕ್ಕಿದೆ. ಆತುರ ಮಾಡಿದ್ದರೆ ನನಗೆ ವಿಷ ಸಿಗುತ್ತಿತ್ತು. ಮುಂದಿನ ದಿನಗಳಲ್ಲಿ ಉಪಮುಖ್ಯಮಂತ್ರಿಗಳಿಗೂ ಪ್ರಸಾದ ಸಿಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ರೈಲ್ವೆ ಇಂಜಿನ್ ರೀತಿ ಇದ್ದಾರೆ. ಮಂತ್ರಿಗಳೆಲ್ಲ ಬೋಗಿಗಳ ರೀತಿ ಕೆಲಸ ಮಾಡುತ್ತಿದ್ದಾರೆ. ಶಾಸಕರುಗಳು ಪ್ರಯಾಣಿಕರ ರೀತಿ ಕೂತು ಸಂಚಾರ ಮಾಡುತ್ತಿದ್ದೇವೆ. ನಮ್ಮ ಜರ್ನಿ ಸೂಪರ್ ಆಗಿ ಸಾಗುತ್ತಿದೆ ಎಂದು ಕೊತ್ತೂರು ಮಂಜುನಾಥ್ ತಿಳಿಸಿದರು.
ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು ಆ ರೀತಿ ಹೇಳಿರುವುದನ್ನು ನಾನು ಕೇಳಿಲ್ಲ. ಇಲ್ಲಿ ಅವರಿಗೆ ಬೆಂಬಲ, ಇವರಿಗೆ ಬೆಂಬಲ ಅಂತೇನು ಇಲ್ಲ. ಕೈ ಸಿಂಬಲ್‌ನಲ್ಲಿ ಗೆದ್ದಿರುವ ನಾವೆಲ್ಲರು ಒಂದೇ. ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಅದೇ ಅಂತಿಮ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಡಿ.ಕೆ.ಶಿವಕುಮಾರ್ ಕಷ್ಟಪಟ್ಟು ಸಂಘಟನೆ ಮಾಡಿದ್ದಾರೆ, ಅದರಲ್ಲಿ ಎರಡು ಮಾತಿಲ್ಲ. ನನ್ನಂತ ಸಣ್ಣ ಸಮುದಾಯದ ವ್ಯಕ್ತಿಯನ್ನು ಶಾಸಕನನ್ನಾಗಿ ಮಾಡಿದ್ದಾರೆ. ಅವರಿಗೂ ಒಂದು ಅವಕಾಶ ಸಿಗಬೇಕು. ಈ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಕೊತ್ತೂರು ಮಂಜುನಾಥ್ ಹೇಳಿದರು.