ಸಾರಾಂಶ
ಮುಸ್ಲಿಂರಿಗಾಗಿ ಗುತ್ತಿಗೆಯಲ್ಲಿ ಮೀಸಲಾತಿ ಜಾರಿ ಸಂಬಂಧದ ಮಸೂದೆ ವಿರೋಧಿಸಿದ್ದಕ್ಕೆ ಸದನದಿಂದ ೧೮ ಬಿಜೆಪಿ ಶಾಸಕರನ್ನು ೬ ತಿಂಗಳು ಹೊರ ಹಾಕಿರುವುದು ಖಂಡನೀಯ. ಕೂಡಲೇ ಈ ಸಂವಿಧಾನ ವಿರೋಧಿ ನಡೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಲಿದೆ.
ಕಾರಟಗಿ:
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.ಇಲ್ಲಿನ ಕನಕದಾಸ ವೃತ್ತದಲ್ಲಿ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರು ಡಿಕೆಶಿ ರಾಜೀನಾಮೆಗೆ ಆಗ್ರಹಿಸಿದರು. ಡಿಕೆಶಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕ್ಷಮೆ ಕೇಳುವಂತೆ ಒತ್ತಾಯಿಸಿದರು.
ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ ಮಾತನಾಡಿ, ಡಿ.ಕೆ. ಶಿವಕುಮಾರ ವಿರುದ್ಧ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂತ್ರಿ ಮಂಡಲದಿಂದ ಹೊರ ಹಾಕಬೇಕೆಂದು ಒತ್ತಾಯಿಸಿದರು. ಮುಸ್ಲಿಂರಿಗೆ ಮೀಸಲಾತಿ ನೀಡಲು ಸಂವಿಧಾನವನ್ನೇ ಬದಲಾಯಿಸುವ ಮಾತನಾಡುವ ಮೂಲಕ ಅಂಬೇಡ್ಕರ್ ರಚಿತ ಪವಿತ್ರ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ ಎಂದರು.ಮುಸ್ಲಿಂರಿಗಾಗಿ ಗುತ್ತಿಗೆಯಲ್ಲಿ ಮೀಸಲಾತಿ ಜಾರಿ ಸಂಬಂಧದ ಮಸೂದೆ ವಿರೋಧಿಸಿದ್ದಕ್ಕೆ ಸದನದಿಂದ ೧೮ ಬಿಜೆಪಿ ಶಾಸಕರನ್ನು ೬ ತಿಂಗಳು ಹೊರ ಹಾಕಿರುವುದಕ್ಕೆ ಕೂಡಾ ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಈ ಸಂವಿಧಾನ ವಿರೋಧಿ ನಡೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಕುದೆ ಎಂದು ಎಚ್ಚರಿಸಿದರು.
ಈ ವೇಳೆ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಕುಮಾರಿ, ಪುರಸಭೆ ಸದಸ್ಯ ಬಸವರಾಜ ಕೊಪ್ಪದ, ಎಸ್‌ಟಿ ಮೋರ್ಚಾ ಅಧ್ಯಕ್ಷ ದೇವರಾಜ್ ನಾಯಕ, ಲಿಂಗಪ್ಪ ಗೌರಪುರ, ಪಂಪಣ್ಣ ಮೇಟಿ, ಹನುಮಂತಪ್ಪ ಕಬ್ಬೇರ, ಬೇವಿನಾಳ, ಗೋವಿಂದಪ್ಪ ಸಿದ್ದಾಪುರ ಹಾಲಸಮುದ್ರ, ವೆಂಕಟೇಶ ಬೂದಿ, ಶಶಿ ಮ್ಯಾದಾರ, ಶರಣಬಸವ ದೇವರಮನಿ, ಸಣ್ಣ ಮರಿಸ್ವಾಮಿ ಬರಗೂರು, ಯಮನೂರಪ್ಪ ಮಾಸ್ತರ್,ಅಯ್ಯಪ್ಪ ಬಂಡಿ, ರಮೇಶ ಸಿದ್ದು ಯರಡೋಣಾ ಇದ್ದರು.