ಸಾರಾಂಶ
ರಾಮನಗರ: ‘ಕುಮಾರಸ್ವಾಮಿ ರೀಲ್ ಬಿಡ್ತಾವ್ನೆ. ನಾನು ಕಲ್ಲು ಒಡಿತಿದ್ನೋ, ಕಸ ಹೊಡಿತಿದ್ನೋ ಮುಂದೆ ಮಾತನಾಡ್ತೀನಿ. ಅವನು ಸಿನೆಮಾದ ಡಬ್ಬಾ ತಯಾರು ಮಾಡಿಕೊಂಡು ನಮ್ಮತ್ರ ಬರುವವನು, ಅವನು ಕೊಟ್ಟ ಡಬ್ಬಾ ತೆಗೆದುಕೊಂಡು ನಾವು ಎಲ್ಲ ಕಡೆ ಹೋಗಿ ರೀಲ್ ಬಿಟ್ಟು ಬಂದಿರುವವರು’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಂಸದ ಡಿ.ಕೆ.ಸುರೇಶ್ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಬಿಡದಿಯ ಅವರಗೆರೆಯಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮೀ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಮ್ಮ ಪಾಲಿಗೆ ಬರಬೇಕಾದ ತೆರಿಗೆ ಪಾಲನ್ನು ಕೇಳಿದರೆ, ಈಶ್ವರಪ್ಪ ಗುಂಡಿಕ್ಕಿ ಎನ್ನುತ್ತಾರೆ. ಅವರು ಬೆಂಗಳೂರಿಗೆ ಬರಲಿ ನಾನೇ ಅವರ ಮುಂದೆ ಹೋಗುತ್ತೇನೆ’ ಎಂದ ಅವರು, ‘ಇಂಥವರ ಪರವಾಗಿ ಕುಮಾರಸ್ವಾಮಿ ಸಹ ವಕಾಲತ್ತು ಹಾಕುತ್ತಾರೆ’ ಎಂದು ಕಿಡಿಕಾರಿದರು. ಕರ್ನಾಟಕದ ರೈತರಿಗೆ, ಮಹಿಳೆಯರಿಗೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಹಣವನ್ನ ಕೇಳಿದರೆ, ಬಿಜೆಪಿಯವರು ನನ್ನನ್ನ ರಾಷ್ಟ್ರದ್ರೋಹಿ ಅಂದರು. ನನ್ನನ್ನ ಗುಂಡಿಕ್ಕಿ ಕೊಲ್ಲಿ ಅಂದರು. ನಾನು ನನ್ನ ಸ್ವಂತಕ್ಕೆ ಏನನ್ನು ಕೇಳಲಿಲ್ಲ. ವರ್ಷಕ್ಕೆ ಪ್ರತಿಯೊಂದು ಕುಟುಂಬ ೧೩ ಸಾವಿರ ತೆರಿಗೆ ಕಟ್ಟುತ್ತಿದೆ. ಆದರೂ ನಮಗೆ ಸಿಗಬೇಕಾದ ಅನುದಾನ ಸಿಗುತ್ತಿಲ್ಲ. ನಮ್ಮ 4.30 ಲಕ್ಷ ಕೋಟಿ ಹಣ ತೆರಿಗೆ ನಮಗೆ ಬರಬೇಕು. ಆದ್ರೆ ಬಿಜೆಪಿ ಸರ್ಕಾರ ಅನ್ಯಾಯ ಮಾಡ್ತಿದೆ. ನಮ್ಮ ರಾಜ್ಯಕ್ಕೆ ಕೊಡಬೇಕಿದ್ದ ದುಡ್ಡನ್ನು ನಮಗೆ ಕೊಡಿ. ಆಮೇಲೆ ಬೇಕಿದ್ದರೆ ನನ್ನ ಎದೆಗೆ ಗುಂಡಿಕ್ಕಿ. ನಾನು ಗುಂಡಿಗೆ ಎದೆಕೊಡಲು ಸಿದ್ದ, ಕನ್ನಡಿಗರಿಗೋಸ್ಕರ ನನ್ನ ದೇಹವನ್ನೇ ಕೊಡುತ್ತೇನೆಂದರು.
ಸುರೇಶ್ ಗ್ಯಾರಂಟಿ:ದೇಶಕ್ಕೆ ಮೋದಿ ಗ್ಯಾರಂಟಿ ಅಂತಾರೆ. ಆದರೆ, ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ.ಸುರೇಶ್ ಗ್ಯಾರಂಟಿ. ನಾವು ನಮ್ಮ ಅನುದಾನ ಕೇಳಿದ್ರೆ ಜನಸಂಖ್ಯೆ ಕಡಿಮೆ ಅಂತಾರೆ. ನಾವು ಮಕ್ಕಳು ಕಡಿಮೆ ಮಾಡಿಕೊಂಡಿದ್ದೆ ತಪ್ಪಾ? ನಾವು ಜನಸಂಖ್ಯೆ ನಿಯಂತ್ರಣ ಮಾಡಿದ್ದೇ ತಪ್ಪಾ? ಉತ್ತರ ಪ್ರದೇಶದಲ್ಲಿ ಹೆಚ್ಚು ಮಕ್ಕಳು ಮಾಡವ್ರೆ ಅಂತ ನಮ್ಮ ದುಡ್ಡನ್ನ ಅಲ್ಲಿಗೆ ಕೊಡ್ತೀರಾ.?
ಇದರ ವಿರುದ್ಧ ರಾಜ್ಯದ ಜನ ಧ್ವನಿ ಎತ್ತಬೇಕು. ನಮ್ಮ ಜನ ಉತ್ತರ ಪ್ರದೇಶಕ್ಕೆ, ಗುಜರಾತ್, ರಾಜಸ್ಥಾನಕ್ಕೆ ಹೋದ್ರೆ ಕೆಲಸ ಕೊಡ್ತಾರಾ. ಕನ್ನಡಿಗರಿಗೆ ಕರ್ನಾಟಕ ಒಂದೇ. ಹಾಗಾಗಿ ನಮ್ಮ ನಾಡನ್ನ ನಾವು ಉಳಿಸಿಕೊಳ್ಳಬೇಕು ಎಂದರು.ಮಹಿಳೆಯರಿಗೆ ಶಕ್ತಿ ತುಂಬಿದ್ದೇವೆ:
ಮಹಿಳೆಯರ ಹೆಸರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿಯೋಜನೆಗಳಿಂದ ಮಹಿಳೆಯರಿಗೆ ಶಕ್ತಿ ತುಂಬಿದ್ದೇವೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ ಐದು ಗ್ಯಾರಂಟಿಗಳ ಭರವಸೆ ಕೊಟ್ಟಿದ್ದೆವು. ಇದಕ್ಕೆ ಕೆಲವರು ಟೀಕೆ ಮಾಡಿದ್ರು. ನಮ್ಮ ಸರ್ಕಾರ ಬಂದ ಬಳಿಕ ನಮ್ಮ ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ ಎಂದರು.ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದಾರೆ ಮಾಡಲಿ. ಹಣ ಎಲ್ಲಿಂದ ಬರುತ್ತೆ, ಗ್ಯಾರಂಟಿ ಹೇಗೆ ಕೊಡ್ತೀರಿ ಅಂತಿದ್ರು. ಬಿಜೆಪಿಯವ್ರು ೪೦% ಕಮಿಷನ್ ಸರ್ಕಾರ ಮಾಡುತ್ತಿದ್ದರು. ನಾವು ಆ ಕಮಿಷನನ್ನ ಕಟ್ ಮಾಡಿ ಗ್ಯಾರಂಟಿ ಮೂಲಕ ಜನರಿಗೆ ಕೊಟ್ಟಿದ್ದೇವೆ. ಬಿಜೆಪಿಯ ಭ್ರಷ್ಟಾಚಾರ ತಪ್ಪಿಸಿ ಆ ಹಣವನ್ನ ಗ್ಯಾರಂಟಿಗೆ ಬಳಸಿದ್ದೇವೆ. ಈ ಗ್ಯಾರಂಟಿಗಳಿಗೆ ನಿಮ್ಮತ್ರ ನಾವು ಹಣ ಪಡೆದಿಲ್ಲ ಎಂದರು.
ಗ್ಯಾರಂಟಿ ಕಾರ್ಡ್‌ಗಳನ್ನ ನಿಮಗೆ ಸಹಿ ಮಾಡಿ ಕೊಟ್ಟಿದ್ವಿ. ಅದೇ ರೀತಿ ನಿಮಗೆ ಗ್ಯಾರಂಟಿ ತಲುಪಿಸುವ ಕೆಲಸ ಮಾಡಿದ್ದೇವೆ. ಜೆಡಿಎಸ್ ಅವ್ರು ಹೇಳ್ತಿದ್ರು, ಮಾತೆತ್ತದರೆ ಕಾಂಗ್ರೆಸ್ ಏನು ಮಾಡ್ತು ಅಂತಿದ್ರು. ಇದೇ ಕಾಂಗ್ರೆಸ್ ಮಹಿಳೆಯರಿಗೆ ಸ್ತ್ರೀ ಶಕ್ತಿ ಸಂಘಗಳನ್ನ ಮಾಡಿದೆ. ಸ್ತ್ರೀ ಶಕ್ತಿ ಕಾರ್ಯಕ್ರಮದ ಮೂಲಕ ಜನರನ್ನ ಆರ್ಥಿಕ ಸಬಲರನ್ನಾಗಿ ಮಾಡಿದ್ದೇವೆ. ಎಲ್ಲಾ ಬ್ಯಾಂಕ್ ಗಳು ಮಹಿಳೆಯರಿಗೆ ಸಾಲ ಕೊಡಲು ಮುಂದಾಗಿದ್ದಾರೆ. ಇದು ಬಿಜೆಪಿ-ಜೆಡಿಎಸ್‌ನವರ ಕಾರ್ಯಕ್ರಮ ಅಲ್ಲ. ಇದು ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ ಎಂದರು.