ಡಿ.ಕೆ.ಸುರೇಶ್ ಹೇಳಿಕೆಗೆ ಬೇರೆ ಅರ್ಥ ಬೇಡ: ಉದಯ್

| Published : Oct 30 2024, 12:33 AM IST

ಸಾರಾಂಶ

ಯೋಗೇಶ್ವರ್ ಗೆ ಅಧಿಕಾರ ಬೇಕಿದ್ದರೆ ಬಿಜೆಪಿಯಲ್ಲೇ ಇರಬಹುದಿತ್ತು. ಆದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಹೀಗಾಗಿ ಅವರ ಗೆಲುವು ಅನಿವಾರ್ಯ.

ಕನ್ನಡಪ್ರಭ ವಾರ್ತೆ ಮದ್ದೂರು

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ದೇವೇಗೌಡರು ಆ್ಯಂಬ್ಯುಲೆನ್ಸ್‌ನಲ್ಲಿ ಬಂದು ಪ್ರಚಾರ ನಡೆಸುತ್ತಿದ್ದಾರೆ ಎಂಬ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಶಾಸಕ ಕೆ.ಎಂ. ಉದಯ್ ಮಂಗಳವಾರ ಹೇಳಿದರು.

ತಾಲೂಕಿನ ಕದಲೂರು ಗ್ರಾಮದಲ್ಲಿ ಚನ್ನಪಟ್ಟಣ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಪ್ರಚಾರ ಸಂಬಂಧ ನಡೆದ ಕಾರ್ಯಕರ್ತರು, ಮುಖಂಡರ ಸಭೆ ನಡೆಸಿ ಮಾತನಾಡಿ, ಎಚ್.ಡಿ.ದೇವೇಗೌಡರ ಆರೋಗ್ಯದ ಬಗ್ಗೆ, ಇಳಿ ವಯಸ್ಸನ್ನೂ ಗಣನೆಗೆ ತೆಗೆದುಕೊಳ್ಳದೆ ಆ ಪಕ್ಷದ ನಾಯಕರು ಚುನಾವಣೆಯಲ್ಲಿ ಅವರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ರೀತಿಯಲ್ಲಿ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ ಎಂದರು.

ಚನ್ನಪಟ್ಟಣ ಕ್ಷೇತ್ರಕ್ಕೆ ನೀರಾವರಿ ಮಾತ್ರವಲ್ಲದೆ, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಸಿ.ಪಿ. ಯೋಗೇಶ್ವರ್ ಮಾಡಿದ್ದಾರೆ. ಮತ್ತಷ್ಟು ಕ್ಷೇತ್ರದ ಅಭಿವೃದ್ಧಿಗಾಗಿ ಯೋಗೇಶ್ವರ್ ಗೆಲುವನ್ನು ಗುರಿಯಾಗಿಟ್ಟುಕೊಂಡು ನಾವು ಪ್ರಚಾರದಲ್ಲಿ ತೊಡಗುತ್ತಿದ್ದೇವೆ ಎಂದು ತಿಳಿಸಿದರು.

ಯೋಗೇಶ್ವರ್ ಗೆ ಅಧಿಕಾರ ಬೇಕಿದ್ದರೆ ಬಿಜೆಪಿಯಲ್ಲೇ ಇರಬಹುದಿತ್ತು. ಆದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಹೀಗಾಗಿ ಅವರ ಗೆಲುವು ಅನಿವಾರ್ಯ ಎಂದರು.

ಯೋಗೇಶ್ವರ್ ಪರ ಪ್ರಚಾರಕ್ಕಾಗಿ ಕ್ಷೇತ್ರದ ಬೇಗೂರು ಜಿಪಂ ವ್ಯಾಪ್ತಿಯಲ್ಲಿ 500 ಮಂದಿ ಪಕ್ಷದ ಕಾರ್ಯಕರ್ತರು ಭಾಗವಹಿಸಿ ಪ್ರಚಾರದಲ್ಲಿ ತೊಡಗುತ್ತಾರೆ. ಪಕ್ಷದ ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಮನೆ ಮನೆಗೆ ತೆರಳಿ ಯೋಗೇಶ್ವರ್ ಪರ ಪ್ರಚಾರ ನಡೆಸಬೇಕು ಎಂದು ಮನವಿ ಮಾಡಿದರು.

ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಸಿ. ನಾಗೇಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಪುರಸಭಾ ಉಪಾಧ್ಯಕ್ಷ ಟಿ.ಆರ್. ಪ್ರಸನ್ನಕುಮಾರ್, ಮುಖಂಡರಾದ ವಳಗೆರೆಹಳ್ಳಿ ಶಂಕರೇಗೌಡ, ಕೆ.ದಾಸೇಗೌಡ, ಶಂಕರಲಿಂಗೇಗೌಡ, ಸಿ.ಟಿ. ಶಂಕರ್ ಮತ್ತಿತರ ಮುಖಂಡರು ಇದ್ದರು.