ಡಿ.ಕೆ.ಸುರೇಶ್‌, ವಿನಯ್‌ ಕುಲಕರ್ಣಿ ಅಮಾನತುಗೊಳಿಸಬೇಕು: ಈಶ್ವರಪ್ಪ ಆಗ್ರಹ

| Published : Feb 08 2024, 01:33 AM IST

ಡಿ.ಕೆ.ಸುರೇಶ್‌, ವಿನಯ್‌ ಕುಲಕರ್ಣಿ ಅಮಾನತುಗೊಳಿಸಬೇಕು: ಈಶ್ವರಪ್ಪ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತವನ್ನೇ ಇಬ್ಭಾಗ ಮಾಡುವ ಹೇಳಿಕೆ ನೀಡಿದ ಡಿ.ಕೆ.ಸುರೇಶ್ ಹಾಗೂ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಬೇಕು. ಒಂದು ಕಡೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾತ್ರೆ ಮಾಡಿ ಇದು ಅಖಂಡ ಭಾರತ ಎನ್ನುತ್ತಾರೆ. ಇನ್ನೊಂದಡೆ ರಾಜ್ಯ ನಾಯಕರು ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶವನ್ನಾಗಿ ನಾವು ಕೇಳುತ್ತೇವೆ ಎಂದು ಹೇಳುತ್ತಾರೆ. ಇದು ಎಂತಹ ಸಂಸ್ಕೃತಿ? ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭಾರತವನ್ನೇ ಇಬ್ಭಾಗ ಮಾಡುವ ಹೇಳಿಕೆ ನೀಡಿದ ಡಿ.ಕೆ.ಸುರೇಶ್ ಹಾಗೂ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಂದು ಕಡೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾತ್ರೆ ಮಾಡಿ ಇದು ಅಖಂಡ ಭಾರತ ಎನ್ನುತ್ತಾರೆ. ಇನ್ನೊಂದಡೆ ರಾಜ್ಯ ನಾಯಕರು ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶವನ್ನಾಗಿ ನಾವು ಕೇಳುತ್ತೇವೆ ಎಂದು ಹೇಳುತ್ತಾರೆ. ಇದು ಎಂತಹ ಸಂಸ್ಕೃತಿ? ಎಂದು ಪ್ರಶ್ನಿಸಿದರು.

ಕರ್ನಾಟಕದ ಈ ಇಬ್ಬರು ದೇಶವನ್ನೇ ಭಾಗ ಮಾಡಲು ಹೊರಟಿದ್ದಾರೆ. ಇದು ಹೊಸತೇನಲ್ಲ. ಕಾಂಗ್ರೆಸ್ ಪಕ್ಷ ಸ್ವಾತಂತ್ರದ ಸಂದರ್ಭದಲ್ಲೇ ದೇಶವನ್ನು ಇಬ್ಭಾಗ ಮಾಡಿದೆ. ಇಂತಹ ವ್ಯಕ್ತಿಗಳನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಹರಿಹಾಯ್ದರು.

ದೆಹಲಿಯಲ್ಲಿ ಹೈಡ್ರಾಮ:

ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರೆಲ್ಲ ದೆಹಲಿಯಲ್ಲಿ ದೊಡ್ಡ ಡ್ರಾಮವನ್ನೇ ಮಾಡುತ್ತಿದ್ದಾರೆ. ರಾಜ್ಯದ ಜನರ ಹಣವನ್ನು ತಮ್ಮ ಪ್ರವಾಸಕ್ಕಾಗಿ ಒಯ್ದು ದೆಹಲಿಯಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಮಾಡುತ್ತಿದ್ದಾರೆ. ಇದು ಚುನಾವಣಾ ಪ್ರಚಾರವಲ್ಲದೇ ಮತ್ತೇನೂ ಅಲ್ಲ. ಇದಕ್ಕೆ ಅವರು ರಾಜ್ಯದ ಜನರ ತೆರಿಗೆ ಹಣವನ್ನೇ ಬಳಸಬೇಕಿತ್ತೇ ಎಂದು ಕಿಡಿಕಾರಿದರು.

ಶ್ವೇತಪತ್ರ ಹೊರಡಿಸಲಿ:

ಕೇಂದ್ರದಿಂದ ಹಣ ಬಂದಿಲ್ಲ ಎಂದು ಕಾಂಗ್ರೆಸ್‌ನವರು ಬೊಬ್ಬೆ ಹೊಡೆಯುತ್ತಿದ್ದಾರೆ. ಈಗಾಗಲೇ ಕೇಂದ್ರ ಆರ್ಥಿಕ ಸಚಿವರು ಈ ಬಗ್ಗೆ ವಿವರಣೆ ನೀಡಿದ್ದಾರೆ. ಸಿದ್ಧರಾಮಯ್ಯ ಅವರು ಕೇಂದ್ರ ಹಣಕಾಸು ಸಭೆಗೆ ಹೋಗಲಿಲ್ಲ. ಹೋಗಿದ್ದರೆ ಕೇಳಬಹುದಿತ್ತು. ಕೇವಲ ಕೇಂದ್ರದಿಂದ ಹಣ ಬಂದಿಲ್ಲ ಎಂದು ನೂರು ಸಲ ಸುಳ್ಳು ಹೇಳಿ, ಅದನ್ನೇ ಸತ್ಯ ಮಾಡಲು ಹೊರಟಿದ್ದಾರೆ. ಹೀಗೆಲ್ಲಾ ಆರೋಪ ಮಾಡುವುದನ್ನು ಬಿಟ್ಟು ಯುಪಿಎ ಮತ್ತು ಎನ್.ಡಿ.ಎ. ಸರ್ಕಾರ ಇದ್ದಾಗ ಎಷ್ಟು ಹಣ ಬಂದಿತ್ತು ಎಂಬುದನ್ನು ತಿಳಿಸಲಿ. ಇದಕ್ಕಾಗಿ ಶ್ವೇತಪತ್ರ ಹೊರಡಿಸಲಿ ಎಂದು ಹರಿಹಾಯ್ದರು.

ಕಾಂಗ್ರೆಸ್‌ನ ರಾಮಲಿಂಗಾ ರೆಡ್ಡಿ, ಬಾಲಕೃಷ್ಣ ಅವರಿಗೆ ಹೇಗೆ ಮಾತನಾಡಬೇಕು ಎಂಬ ಸೌಜನ್ಯವೇ ಇಲ್ಲ. ಗಂಡಸ್ತನವಿದ್ದರೆ ಎಂದು ಮಾತನಾಡಿ ಹೆಣ್ಣುಮಕ್ಕಳಿಗೆ ಅಗೌರವ ತೋರುತ್ತಾರೆ. ಇದು ಸರಿಯಲ್ಲ ಈ ಇಬ್ಬರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಚಾಟಿ ಬೀಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವಸ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಮಾಜಘಾತುಕ ಶಕ್ತಿಗಳು ಹೆಚ್ಚುತ್ತಿವೆ. ಈ ಶಕ್ತಿಗಳಿಗೆ ಶಿಕ್ಷೆ ಆಗುವುದಿಲ್ಲ ಎಂಬ ಧೈರ್ಯವಿದೆ. ಕಾಂಗ್ರೆಸ್ ಸರ್ಕಾರ ಇಂತಹವರನ್ನು ರಕ್ಷಣೆ ಮಾಡುತ್ತಿರುವುದರಿಂದಲೇ ಹಲ್ಲೆಯಂತಹ ಘಟನೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.

ಶಿಕಾರಿಪುರದಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕನಿಗೆ ಬುದ್ಧಿವಾದ ಹೇಳಿದ್ದಕ್ಕೆ ನಾಲ್ಕು ಜನ ಬಂದು ಆತನಿಗೆ ಚೂರಿ ಹಾಕಿದ್ದಾರೆ. ಹೊಳೆಹೊನ್ನೂರಿನಲ್ಲಿಯೂ ಹಲ್ಲೆ ಘಟನೆ ನಡೆದಿದೆ. ಜಿಲ್ಲಾ ಪೊಲೀಸರು ತಕ್ಷಣವೇ ಇಂತಹ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವರಾಜ್, ಮಾಲತೇಶ್, ಮಧುಸೂದನ್, ವಿನ್ಸೆಂಟ್, ಸತೀಶ್, ಕೆ.ವಿ. ಅಣ್ಣಪ್ಪ ಮತ್ತಿತರರು ಇದ್ದರು.

- - - -7ಎಸ್ಎಂಜಿಕೆಪಿ05: ಕೆ.ಎಸ್‌.ಈಶ್ವರಪ್ಪ