ಡಿಕೆಶಿ-ಶಾ ಭೇಟಿ: ಕೈನಲ್ಲಿ ಪರ, ವಿರೋಧ ಚರ್ಚೆ

| Published : Mar 02 2025, 01:15 AM IST

ಸಾರಾಂಶ

ಈಶ ಫೌಂಡೇಶನ್‌ನಲ್ಲಿ ನಡೆದ ಶಿವರಾತ್ರಿ ಉತ್ಸವದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸದ್ಗುರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೊತೆ ವೇದಿಕೆ ಹಂಚಿಕೊಂಡ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸಂಪುಟದ ಸಚಿವರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಈಶ ಫೌಂಡೇಶನ್‌ನಲ್ಲಿ ನಡೆದ ಶಿವರಾತ್ರಿ ಉತ್ಸವದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸದ್ಗುರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೊತೆ ವೇದಿಕೆ ಹಂಚಿಕೊಂಡ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸಂಪುಟದ ಸಚಿವರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.ಹಾಸನದಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ‘ನಮ್ಮ ನಾಯಕ ರಾಹುಲ್‌ ಗಾಂಧಿಯನ್ನೇ ಯಾರೆಂದು ನನಗೆ ಗೊತ್ತಿಲ್ಲ ಎನ್ನುವ ಸದ್ಗುರು ಜತೆ ವೇದಿಕೆ ಹಂಚಿಕೊಳ್ಳುವುದು ಎಷ್ಟು ಸರಿ?. ಅದರ ಔಚಿತ್ಯವೇನಿತ್ತು ಎನ್ನುವುದನ್ನು ವೇದಿಕೆ ಹಂಚಿಕೊಂಡವರೆ ಹೇಳಬೇಕು’ ಎಂದು ಡಿಕೆಶಿ ನಡೆಗೆ ಬೇಸರ ವ್ಯಕ್ತಪಡಿಸಿದರು.

ಈ ಮಧ್ಯೆ, ಮೈಸೂರಿನಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ‘ಕಾರ್ಯಕ್ರಮಕ್ಕೆ ಹೋಗಿದ್ದ ಬಗ್ಗೆ ಡಿಕೆಶಿಯವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಅದವರ ವೈಯಕ್ತಿಕ ನಂಬಿಕೆ. ಇದಕ್ಕೆ ಹೆಚ್ಚು ಒತ್ತು ನೀಡುವ ಅವಶ್ಯಕತೆಯೇ ಇಲ್ಲ’ ಎಂದಿದ್ದಾರೆ.ವಿಜಯಪುರದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್‌, ‘ಡಿಕೆಶಿ ಕಟ್ಟಾ ಕಾಂಗ್ರೆಸ್ಸಿಗ. ಅವರು ಬಿಜೆಪಿ ಸೇರುತ್ತಾರೆ ಎಂಬುದು ಊಹಾಪೋಹ. ಕಾಂಗ್ರೆಸ್-ಬಿಜೆಪಿಯವರು ಎಷ್ಟೋ ಧಾರ್ಮಿಕ ಕಾರ್ಯಗಳಲ್ಲಿ ಒಟ್ಟಿಗೆ ಸೇರುತ್ತೇವೆ, ಅದರಲ್ಲಿ ತಪ್ಪೇನಿದೆ?’ ಎಂದರು.

ಮಂಡ್ಯದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ‘ಅದವರ ವೈಯಕ್ತಿಕ ವಿಚಾರ. ಡಿಕೆಶಿಗೆ ಪಕ್ಷ ಬಿಟ್ಟು ಹೋಗುವ ಅವಶ್ಯಕತೆ ಏನಿದೆ’ ಎಂದು ಪ್ರಶ್ನಿಸಿದರು.

ಬಿಜೆಪಿಗೆ ಡಿಕೆಶಿ ಅವಶ್ಯಕತೆ ಇಲ್ಲ: ಅಶ್ವತ್ಥನಾರಾಯಣ

ಮಂಡ್ಯ: ಬಿಜೆಪಿ ಸದೃಢವಾಗಿದೆ. ನಮಗೆ ಯಾರ ಅವಶ್ಯಕತೆ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿಕೆಶಿ ಲೆಕ್ಕಾಚಾರದ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡಲ್ಲ. ನಮ್ಮ ಪಕ್ಷಕ್ಕೆ ಯಾರ ಅವಶ್ಯಕತೆ ಇಲ್ಲ. ಆದರೆ ರಾಜಕೀಯದಲ್ಲಿ ಯಾರು ಬೇಕಾದರೂ ಬರಬಹುದು, ಹೋಗಬಹುದು ಎಂದು ಉತ್ತರಿಸಿದರು. ಬಿಜೆಪಿ-ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಜಮೀರ್ ಹೇಳಿಕೆಗೆ ವಾಗ್ದಾಳಿ ನಡೆಸಿ, ಸಂಪರ್ಕದಲ್ಲಿದ್ದರೆ ಏನು ಬೇಕಾದರೂ ಮಾಡಲಿ. ತಾಕತ್ತಿದ್ದರೆ ಮಾಡಿ ತೋರಿಸಲಿ. ಗಾಜಿನ ಮನೆಯಲ್ಲಿರುವವರೆಲ್ಲ ಸವಾಲು ಹಾಕುವುದು ಸಲ್ಲ ಎಂದು ಕುಟುಕಿದರು.ಹಿಂದುತ್ವದ ವಿಷಯದಲ್ಲಿ ಡಿಕೆಶಿ ಮಾದರಿ, ಸಿದ್ದುಗೂ ಈ ಬುದ್ಧಿ ಬರಲಿ: ಈಶ್ವರಪ್ಪಹುಬ್ಬಳ್ಳಿ: ಡಿಸಿಎಂ ಡಿ.ಕೆ. ಶಿವಕುಮಾರ್‌ ಹಿಂದುತ್ವದ ಪರ ನಿಲುವು ಪ್ರಕಟಿಸುವುದರೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯಗೂ ಈ ಬುದ್ಧಿ ಬರಲಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಹಿಂದುತ್ವ ನಿಲುವು ನಾಟಕವೋ, ನಿಜವೋ ಎಂಬುದನ್ನು ದೇವರೇ ತೀರ್ಮಾನ ಮಾಡುತ್ತಾನೆ ಎಂದರು. ಕಾಂಗ್ರೆಸ್ಸಿಗರು ಸ್ವಾತಂತ್ರ್ಯ ಹೋರಾಟ ಮಾಡಿದ್ದೇ ಹಿಂದುತ್ವ ಮತ್ತೆ ವೈಭವೀಕರಿಸುವ ಉದ್ದೇಶದಿಂದ. ಹಳೇ ಕಾಂಗ್ರೆಸ್ಸಿಗರ ರಕ್ತದಲ್ಲಿ ಈಗಲೂ ಹಿಂದುತ್ವ ಇದೆ. ಕೆಲವರು ಮತ ಬ್ಯಾಂಕ್‌ಗಾಗಿ ಮುಸ್ಲಿಮರನ್ನು ಓಲೈಸುತ್ತಾರೆ ಎಂದು ಆರೋಪಿಸಿದರು. ಶಿವಕುಮಾರ್‌ಗೆ ಹಿಂದುತ್ವದ ಬಗ್ಗೆ ಜಾಗೃತಿ ಉಂಟಾಗಿ ಕುಂಭಮೇಳದಲ್ಲಿ ಭಾಗವಹಿಸ್ದರು. ಮಹಾತ್ಮ ಗಾಂಧೀಜಿ ಸಹ ಹಿಂದುತ್ವ ಪ್ರತಿಪಾದಿಸಿದ್ದರು ಎಂದರು.

‘ಕೈ’ಗೆ ತಾಕತ್ತಿದ್ದರೆ ಡಿಕೆಶಿಯನ್ನ ಉಚ್ಛಾಟಿಸಲಿ: ಅಶೋಕ್ ಸವಾಲುಮಂಡ್ಯ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಂಭಮೇಳದಲ್ಲಿ ಭಾಗಿಯಾಗಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಅವರನ್ನು ಹೊಗಳಿದ್ದು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದು ತಪ್ಪು ಎನ್ನುವುದಾದರೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಕಾಂಗ್ರೆಸ್‌ನವರು ಧಮ್ಮು, ತಾಕತ್ತು ಪ್ರದರ್ಶಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದರು.

ಈಶ ಫೌಂಡೇಷನ್‌ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಅಮಿತ್ ಶಾ- ಡಿ.ಕೆ.ಶಿವಕುಮಾರ್ ವೇದಿಕೆ ಹಂಚಿಕೊಂಡಿದ್ದಕ್ಕೆ ಕಾಂಗ್ರೆಸ್‌ನ ಕೆಲವು ನಾಯಕರು ಅಪಸ್ವರ ಎತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾವ್ಯಾರೂ ಡಿ.ಕೆ.ಶಿವಕುಮಾರ್‌ ಅವರನ್ನು ಬಿಜೆಪಿಗೆ ಬರುವಂತೆ ಕರೆದಿಲ್ಲ. ಅವರು ಬಿಜೆಪಿಗೆ ಬರುವ ವಿಚಾರವಾಗಿ ಪಕ್ಷದ ನಾಯಕರೂ ನಮ್ಮೊಂದಿಗೆ ಚರ್ಚೆ ನಡೆಸಿಲ್ಲ. ಮೊದಲು ಕಾಂಗ್ರೆಸ್‌ ಅವರು ಅವರನ್ನು ಪಕ್ಷದಿಂದ ಉಚ್ಛಾಟಸಲಿ, ಮುಂದೆ ಕೇಂದ್ರದ ನಾಯಕರೇ ಎಲ್ಲ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.ಡಿ.ಕೆ.ಶಿವಕುಮಾರ್ ಬೇರೆ ಕಾಂಗ್ರೆಸ್ ನಾಯಕರಂತಲ್ಲ. ಅವರದ್ದು ಒದ್ದು ಕಿತ್ತುಕೊಳ್ಳುವ ಜಾಯಾಮಾನ. ಖರ್ಗೆ ಕುಂಭಮೇಳಕ್ಕೆ ಹೋಗಬೇಡಿ ಎಂದಿದ್ದರು. ಆದರೂ ಡಿ.ಕೆ. ಶಿವಕುಮಾರ್ ಕುಂಭಮೇಳಕ್ಕೆ ಹೋದರು. ಪ್ರಧಾನ ಮಂತ್ರಿ ಮೋದಿ ಅವರನ್ನೂ ಭೇಟಿ ಮಾಡಿದರು. ಕುಂಭಮೇಳ ವಿಚಾರವಾಗಿ ಕಾಂಗ್ರೆಸ್ ನಾಯಕರು ಟೀಕೆ ಮಾಡಿದರು. ಆದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅವರನ್ನು ಡಿ.ಕೆ.ಶಿವಕುಮಾರ್‌ ಹೊಗಳಿದರು. ಇದೆಲ್ಲವನ್ನು ಕಾಂಗ್ರೆಸ್ ನಾಯಕರು ಟೀಕಿಸುತ್ತಾರೆಂದರೆ ಅವರ ಮನಸ್ಥಿತಿ ಎಂತಹದ್ದು ಎನ್ನುವುದು ಅರ್ಥವಾಗುತ್ತೆ ಎಂದರು.