ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಡಿ.ಕೆ.ಶಿವಕುಮಾರ್‌ ಅವರು ವಿಧಾನಸಭೆ ಪ್ರವೇಶ ಬಾಗಿಲಿಗೆ ನಡು ಬಾಗಿಸಿ ನಮಸ್ಕರಿಸುವ ಮೂಲಕ ಒಳ ಪ್ರವೇಶಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಡಿ.ಕೆ.ಶಿವಕುಮಾರ್‌ ಅವರು ವಿಧಾನಸಭೆ ಪ್ರವೇಶ ಬಾಗಿಲಿಗೆ ನಡು ಬಾಗಿಸಿ ನಮಸ್ಕರಿಸುವ ಮೂಲಕ ಒಳ ಪ್ರವೇಶಿಸಿದರು.

ಬಳಿಕ ಸಭಾನಾಯಕ ಕುರ್ಚಿ ಬಳಿ ತಲೆ ಬಾಗಿ ನಮಿಸಿ ಕುಳಿತ ಅವರು ಬಳಿಕ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಜೆಡಿಎಸ್‌ ನಾಯಕ ಸುರೇಶ್ ಬಾಬು ಸೇರಿ ಪ್ರತಿಪಕ್ಷದ ಸದಸ್ಯರಿಗೆ ಕೈ ಕುಲುಕಿ ಸಹಕಾರ ಕೋರಿದರು. ಹಂಗಾಮಿ ಸಭಾಧ್ಯಕ್ಷ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ ವಂದೇ ಮಾತರಂ ಗೀತೆ ಮೂಲಕ ಮಳೆಗಾಲದ ಅಧಿವೇಶನದ ಕಲಾಪ ಆರಂಭಿಸಲಾಯಿತು. ಬಳಿಕ ಸಂತಾಪ ಸೂಚನೆ ನಿರ್ಣಯ ಮಂಡಿಸಿ ಚರ್ಚೆ ಬಳಿಕ ಅಂಗೀಕಾರ ಪಡೆಯಲಾಯಿತು.

ಸಿದ್ದರಾಮಯ್ಯ ಗೈರು

ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನದ ಕಲಾಪಕ್ಕೆ ಸಿದ್ದರಾಮಯ್ಯ ಗೈರು ಹಾಜರಾದರು. ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಕಾವೇರಿ ನಿವಾಸದಲ್ಲೇ ಇದ್ದರೂ ಲೋಕಭವನದಲ್ಲಿ ನಡೆದ ಸಚಿವ ಪದಗ್ರಹಣಕ್ಕೆ ಹೋಗದೆ ಸಿದ್ದರಾಮಯ್ಯ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಗುರುವಾರವೂ ಕಾವೇರಿಯಲ್ಲೇ ಇದ್ದರೂ ಕಲಾಪಕ್ಕೆ ಹಾಜರಾಗದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಸಚಿವ ಸ್ಥಾನ ವಂಚಿತರೂ ಗೈರು!

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದು ಪ್ರಸ್ತುತ ಸಚಿವ ಸ್ಥಾನ ಕಳೆದುಕೊಂಡಿರುವಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ದಿನೇಶ್ ಗುಂಡೂರಾವ್, ಶಿವಾನಂದ ಪಾಟೀಲ್‌, ಮಾಂಕಾಳ್‌ ವೈದ್ಯ ಹಾಗೂ ಆರ್.ಬಿ.ತಿಮ್ಮಾಪುರ ಅವರು ಕಲಾಪಕ್ಕೆ ಗೈರಾಗಿದ್ದರು. ಇನ್ನು ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಅಸಮಾಧಾನಿತ ಶಾಸಕರಾದ ಎಂ.ಕೃಷ್ಣಪ್ಪ, ಪ್ರಿಯಕೃಷ್ಣ ಸಹ ಅಧಿವೇಶನದಿಂದ ದೂರವುಳಿದಿದ್ದರು.

ಮಾಜಿ ಸಚಿವರ ಆಸನಗಳು ಬದಲು:

ಸಚಿವ ಸ್ಥಾನ ಕಳೆದುಕೊಂಡರೂ ಸದನಕ್ಕೆ ಆಗಮಿಸಿದ್ದ ಎಚ್.ಕೆ.ಪಾಟೀಲ್‌, ಎಂ.ಸಿ.ಸುಧಾಕರ್‌, ಲಕ್ಷ್ಮೀ ಹೆಬ್ಬಾಳ್ಕರ್‌, ರಹೀಂ ಖಾನ್‌ ಅವರ ಸ್ಥಳ ಬದಲಿಸಲಾಗಿದೆ. ಮೊದಲ ಸಾಲಿನಲ್ಲಿ ಕೂರುತ್ತಿದ್ದ ಎಚ್.ಕೆ. ಪಾಟೀಲ್‌ 3ನೇ ಸಾಲಿನಲ್ಲಿ, ಶರಣಬಸಪ್ಪ ದರ್ಶನಾಪುರ, ರಹೀಂ ಖಾನ್‌ ಅವರು ಕೊನೆಯ ಸಾಲಿನಲ್ಲಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು 5ನೇ ಸಾಲಿನಲ್ಲಿ ಕೂತಿದ್ದರು.ವಿನಯ್‌ ಕುಲಕರ್ಣಿ ಹಾಜರಿ

ಕೊಲೆ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿ ಶಾಸಕ ಸ್ಥಾನ ಕಳೆದುಕೊಂಡಿದ್ದ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ಮರು ಸ್ಥಾಪಿಸಿ ರಾಜ್ಯ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿನಯ್‌ ಕುಲಕರ್ಣಿ ಅವರು ಗುರುವಾರ ನಡೆದ ಕಲಾಪದಲ್ಲಿ ಹಾಜರಾಗಿದ್ದರು.