ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಮುಖ್ಯಮಂತ್ರಿ ಪಟ್ಟಕ್ಕಾಗಿ ರಾಜ್ಯವಲ್ಲದೆ ಬೇರೆ ರಾಜ್ಯಗಳ ದೇವಾಲಯದಲ್ಲಿ ಡಿ ಕೆ ಶಿವಕುಮಾರ್‌ ಅವರು ಪೂಜೆ ಸಲ್ಲಿಸಿದ್ದರು. ಅಂತೆಯೇ ಬಾಗೂರು ಹೋಬಳಿಯ ನವಿಲೆ ನಾಗೇಶ್ವರ ಸ್ವಾಮಿ ಪುಣ್ಯಕ್ಷೇತ್ರಕ್ಕೆ ಈ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಗೌಪ್ಯವಾಗಿ ದೇವಾಲಯಕ್ಕೆ ಆಗಮಿಸಿ ಡಿಕೆ ಶಿವಕುಮಾರ್ ಅವರು ಪೂಜೆ ಸಲ್ಲಿಸಿ ತೆರಳಿದ್ದರು.ಕಳೆದ ವರ್ಷ ಜುಲೈ 23ರಂದು ನವಿಲೆ ನಾಗೇಶ್ವರ ಸ್ವಾಮಿ ದೇವಾಲಯಕ್ಕೆ ಗೌಪ್ಯವಾಗಿ ಆಗಮಿಸಿ ನಾಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಸಿದ್ದೇಶ್ ಶಾಸ್ತ್ರಿ ಅವರ ಮನೆಯಲ್ಲಿ ದುರ್ಗಾದೇವಿ ಆರಾಧನೆ ಹಾಗೂ ಬಾಳೆಹೊನ್ನೂರು ಮಹಾ ಪೀಠಕ್ಕೆ ಪೂಜೆ ಸಲ್ಲಿಸಿ ಶೀಘ್ರ ಮುಖ್ಯಮಂತ್ರಿ ಸ್ಥಾನ ದೊರೆಯಲಿ ಎಂದು ದೇವರನ್ನು ಪ್ರಾರ್ಥಿಸಿದ್ದರು.

ದೇವಾಲಯದ ಮಹಿಮೆ:

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಸಹ ದೇವಾಲಯಕ್ಕೆ ಭೇಟಿ ನೀಡಿದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಪಟ್ಟಕೇರಿದ್ದರು ಅದರಂತೆ ಡಿಕೆ ಶಿವಕುಮಾರ್ ಅವರು ಸಹ ಶ್ರೀ ನಾಗೇಶ್ವರ ಸ್ವಾಮಿ ಆ ದೇವಾಲಯಕ್ಕೆ ಆಗಮಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಹರಕೆ ಹೊತ್ತಿದ್ದರು. ಇಂದು ಅವರ ಕನಸು ನನಸಾಗಿದೆ. ದೇವರ ಕೃಪೆಯಿಂದ ಮುಖ್ಯಮಂತ್ರಿ ಸ್ಥಾನ ದೊರಕಿದೆ.ನಾಗೇಶ್ವರ ಸ್ವಾಮಿ ದೇವರ ಶಕ್ತಿ ಅಪಾರ:

ಇಡೀ ರಾಜ್ಯದಲ್ಲೇ ನಾಗ ಪೂಜೆಯಲ್ಲಿ ಪ್ರಸಿದ್ಧಿ ಪಡೆದಿರುವ ನವಿಲೆ ನಾಗೇಶ್ವರ ಸ್ವಾಮಿ ದೇವಾಲಯಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಪ್ರತಿನಿತ್ಯ ಭಕ್ತರು ಆಗಮಿಸಿ ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಾರೆ. ರಾಜಕೀಯವಾಗಿ ಯಶಸ್ಸು ಸಿಗಲೆಂದು ಡಿ ಕೆ ಶಿವಕುಮಾರ್ ರವರು ನಾಗೇಶ್ವರ ಸ್ವಾಮಿ ದೇವರಿಗೆ ಹರೆಕೆ ಮಾಡುವ ಮೂಲಕ ಮುಖ್ಯಮಂತ್ರಿ ಸ್ಥಾನ ದೊರಕಲಿ ಎಂದು ದೇವರಲ್ಲಿ ಭಿನ್ನಹವಿಟ್ಟಿದ್ದರು ಕಳೆದ 2025 ಜುಲೈ ತಿಂಗಳ 23ರಂದು ದೇವಾಲಯಕ್ಕೆ ಆಗಮಿಸಿ ಶ್ರೀ ನಾಗೇಶ್ವರ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಶೀಘ್ರ ಮುಖ್ಯಮಂತ್ರಿ ಸ್ಥಾನ ದೊರಕಲಿದೆ ಎಂದು ದೇವರು ಅಪ್ಪಣೆ ನೀಡಿತ್ತು. ಸ್ವಲ್ಪ ವಿಳಂಬವಾದರೂ ದೇವರ ಆಶೀರ್ವಾದದಿಂದ ಸ್ಥಾನ ದೊರೆತಿದೆ ಎಂದು ದೇವಾಲಯದ ಅರ್ಚಕ ಸಿದ್ದೇಶ್ ಶಾಸ್ತ್ರಿ ಪತ್ರಿಕೆಗೆ ಮಾಹಿತಿ ನೀಡಿದರು. ಸ್ಥಳೀಯ ಶಾಸಕರಾದ ಸಿಎನ್ ಬಾಲಕೃಷ್ಣರವರು ಕ್ಷೇತ್ರದ ಪರವಾಗಿ ಅವರನ್ನು ಅಭಿನಂದಿಸಿದ್ದರು.


ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ನಂತರ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯಲಿದ್ದಾರೆ ಎಂದು ಮಾಹಿತಿ ಇದೆ ಇನ್ನೂ ದಿನಾಂಕ ನಿಗದಿಯಾಗಿಲ್ಲ .