9ರ ಮಗುವನ್ನು ಅಪಹರಿಸಿ ಡಿಕೆಶಿ ಆಸ್ತಿ ಬರೆಸಿಕೊಂಡ್ರು: ಗೌಡ

| Published : Apr 18 2024, 02:18 AM IST

9ರ ಮಗುವನ್ನು ಅಪಹರಿಸಿ ಡಿಕೆಶಿ ಆಸ್ತಿ ಬರೆಸಿಕೊಂಡ್ರು: ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದಲ್ಲಿ ಹಣ ಸಂಪಾದನೆ ಮಾಡಿಕೊಂಡು ಬಂದ ಬಿಡದಿ ವ್ಯಕ್ತಿಯ 9 ವರ್ಷದ ಮಗಳನ್ನು ಕಿಡ್ನಾಪ್ ಮಾಡಿ, ಕಣ್ಣಿಗೆ ಬಟ್ಟೆ ಕಟ್ಟಿ ಬಚ್ಚಿಟ್ಟು, ನಂತರ ವ್ಯಕ್ತಿಯನ್ನು ಬೆದರಿಸಿ ಆತನ ಎಲ್ಲ ಆಸ್ತಿಯನ್ನು ಡಿಕೆಶಿಯವರು ಬರೆಸಿಕೊಂಡ ಬಗ್ಗೆ ನನ್ನ ಬಳಿ ದಾಖಲೆಯಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪ ಮಾಡಿದ್ದಾರೆ.

- ಇದಕ್ಕೆಲ್ಲಾ ನನ್ನ ಬಳಿ ದಾಖಲೆಯಿದೆ । ಡಿಸಿಎಂ ವಿರುದ್ಧ ಮಾಜಿ ಪ್ರಧಾನಿ ಗಂಭೀರ ಆರೋಪ

ಕನ್ನಡಪ್ರಭ ವಾರ್ತೆ ಮೂಡಿಗೆರೆ

ಅಮೆರಿಕದಲ್ಲಿ ಹಣ ಸಂಪಾದನೆ ಮಾಡಿಕೊಂಡು ಬಂದ ಬಿಡದಿ ವ್ಯಕ್ತಿಯ 9 ವರ್ಷದ ಮಗಳನ್ನು ಕಿಡ್ನಾಪ್ ಮಾಡಿ, ಕಣ್ಣಿಗೆ ಬಟ್ಟೆ ಕಟ್ಟಿ ಬಚ್ಚಿಟ್ಟು, ನಂತರ ವ್ಯಕ್ತಿಯನ್ನು ಬೆದರಿಸಿ ಆತನ ಎಲ್ಲ ಆಸ್ತಿಯನ್ನು ಡಿಕೆಶಿಯವರು ಬರೆಸಿಕೊಂಡ ಬಗ್ಗೆ ನನ್ನ ಬಳಿ ದಾಖಲೆಯಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನನ್ನ ಎಲ್ಲಾ ಭೂವ್ಯವಹಾರಗಳ ಬಗ್ಗೆ ನನ್ನ ಬಳಿ ದಾಖಲೆಯಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ವಿರುದ್ಧ ಅವರು ಕಿಡಿ ಕಾರಿದರು. ಅಮೆರಿಕದಲ್ಲಿ ಹಣ ಸಂಪಾದಿಸಿಕೊಂಡು ಬಂದ ವ್ಯಕ್ತಿಯೊಬ್ಬ ಬಿಡದಿ ಹತ್ತಿರ ರಸ್ತೆ ಪಕ್ಕದಲ್ಲಿ ಒಂದು ಐಟಿ ಕಂಪನಿಯನ್ನು ಸ್ಥಾಪನೆ ಮಾಡಿದ್ದರು. ಆ ವ್ಯಕ್ತಿ ಸ್ಥಾಪನೆ ಮಾಡಿದ್ದ ಕಂಪನಿಯ ಆಸ್ತಿಗೆ ಇವರು ಒಂದು ಸುಳ್ಳು ಕ್ರಯ ಪತ್ರ ಸ್ಥಾಪನೆ ಮಾಡಿದ್ದರು. ಈ ಸುಳ್ಳು ಕ್ರಯ ಪತ್ರವನ್ನು ಆತನಿಗೆ ತೋರಿಸಿ, ಆತನಿಂದ ಆಸ್ತಿಯನ್ನು ಬರೆಸಿಕೊಂಡಿದ್ದರು. ಪ್ರಕರಣ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗೆ ಹೋಯಿತು. ಅಲ್ಲಿ ಇವರಿಗೆ ಭಾರಿ ಮುಖಭಂಗ ಆಯ್ತು. ಇದಾದ ನಂತರ ಆಸ್ತಿಯ ಮಾಲೀಕನ 9 ವರ್ಷದ ಮಗಳನ್ನು ಕರೆದುಕೊಂಡು ಹೋಗಿ, ಪಕ್ಕದ ಮನೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಇಟ್ಟು, ನಿನ್ನ ಮಗಳು ಬೇಕು ಅಂದರೆ ಸಹಿ ಮಾಡು ಎಂದು ಬೆದರಿಸುತ್ತಾರೆ. ಆ ಮಗುವಿನ ತಾಯಿ ಎಲ್ಲಾ ಬರೆದುಕೊಟ್ಟು ನನ್ನ ಮಗಳನ್ನು ಕರೆದುಕೊಂಡು ಬನ್ನಿ ಎಂದು ಗಂಡನ ಕಾಲು ಹಿಡಿಯುತ್ತಾಳೆ.

ಗಂಡ-ಹೆಂಡತಿ ಮಗುವಿನ ಬಳಿ ಹೋದಾಗ ಕಣ್ಣಿಗೆ ಬಟ್ಟೆ ಕಟ್ಟಿ ಬಚ್ಚಿಟ್ಟಿದ್ದ ಹೆಣ್ಣು ಮಗುವನ್ನು ಮುಂದೆ ಕರೆದುಕೊಂಡು ಬಂದು ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ. ಆ ಮಗು ಅಪ್ಪ ಅಂತ ಓಡಿ ಬರುತ್ತದೆ. ಮತ್ತೆ ಆ ಮಗುವನ್ನು ಒಳಗೆ ತೆಗೆದುಕೊಂಡು ಹೋಗ್ತಾರೆ. ನಂತರ, ಆ ವ್ಯಕ್ತಿಗೆ ಆಸ್ತಿ ಮಾರಾಟ ಮಾಡಿದ್ದಕ್ಕೆ 16 ಲಕ್ಷ ಹಾಗೂ 6 ಲಕ್ಷದ ಎರಡು ಚೆಕ್ ನೀಡಿದ್ದರು. ಆ ಎರಡೂ ಚೆಕ್‌ಗಳು ಬೌನ್ಸ್‌ ಆಗಿವೆ. ಇದನ್ನು ಪ್ರಶ್ನಿಸಿದ್ದಕ್ಕೆ, ಇದನ್ನು ಹೊರಗೆ ಹೇಳಿದ್ರೆ ಕಬ್ಬನ್ ಪಾರ್ಕ್ ನಲ್ಲಿ ಏನಾಗುತ್ತೆ ಅಂತಾ ತಿಳ್ಕೋ ಎಂದು ಆ ವ್ಯಕ್ತಿಗೆ ಬೆದರಿಸುತ್ತಾರೆ. ನಂತರ, ಆಸ್ತಿ ಕಳೆದುಕೊಂಡ ಆ ವ್ಯಕ್ತಿ ಜೀವನಕ್ಕಾಗಿ ಬೇರೆಯವರ ಅಧೀನದಲ್ಲಿ ಕೆಲಸ ಮಾಡಿದರು. ಇವರು ಈಗ ಕಾಂಗ್ರೆಸ್ ಅಧ್ಯಕ್ಷರು ಅಬ್ಬಾ... ಸೋನಿಯಾ, ರಾಹುಲ್ ಅವರಿಗೆ ಬಹಳ ಇಷ್ಟ ಎಂದು ವಾಗ್ದಾಳಿ ನಡೆಸಿದರು.

ಇದಕ್ಕೆಲ್ಲಾ ನನ್ನ ಬಳಿ ದಾಖಲೆ ಇದೆ. ಇದನ್ನು ಎಲೆಕ್ಷನ್ ನಲ್ಲಿ ಬಳಸಿಕೊಳ್ಳಿ ಎಂದು ಲಾಯರ್ ಒಬ್ಬರು ನನಗೆ ಸಂಪೂರ್ಣ ದಾಖಲೆ ತಂದುಕೊಟ್ಟಿದ್ದಾರೆ. ನಾನು ಅನ್ಯಾಯಕ್ಕೊಳಗಾದ ಆ ವ್ಯಕ್ತಿ ಬಳಿಗೆ ಹೋದಾಗ, ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ. ನನ್ನ ಹೆಸರು ವೋಟರ್ ಲಿಸ್ಟ್‌ನಲ್ಲಿಯೇ ಇಲ್ಲ. ಈ ಕರ್ನಾಟಕ ಸಾಕು ಎಂದರು. ಈ ಘಟನೆ ನಡೆದು ಬಹಳ ವರ್ಷವಾಯ್ತು. ಹೀಗಾಗಿ, ಆಸ್ತಿ ಕಳೆದುಕೊಂಡ ಆ ವ್ಯಕ್ತಿಯ ಹೆಸರು ನನಗೆ ಮರೆತು ಹೋಗಿದೆ ಎಂದರು.