ನಾನು ಬದುಕಿನ ಮೇಲೆ ರಾಜಕಾರಣ ಮಾಡುವವನು. ಭಾವನೆಗಳ ಮೇಲೆ ಅಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ/ಚಿಕ್ಕಮಗಳೂರು:

ನಾನು ಬದುಕಿನ ಮೇಲೆ ರಾಜಕಾರಣ ಮಾಡುವವನು. ಭಾವನೆಗಳ ಮೇಲೆ ಅಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದ್ದಾರೆ.

ಕಸ್ತೂರಿ ರಂಗನ್ ವರದಿ ಜಾರಿಯಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ಕೈಗೊಳ್ಳಲು ಡಿಕೆಶಿಯವರು ಶನಿವಾರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಹಾಗೂ ಚಿಕ್ಕಮಗಳೂರಿನಲ್ಲಿ ಸಾರ್ವಜನಿಕರೊಂದಿಗಿನ ನೇರ ಸಂವಾದ ಸಭೆಯಲ್ಲಿ ಪಾಲ್ಗೊಂಡಿದ್ದರು. ಮಂಗಳೂರಿನಿಂದ ಶನಿವಾರ ಬೆಳಗ್ಗೆ 11.20ಕ್ಕೆ ತೀರ್ಥಹಳ್ಳಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌, ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ನಡೆಯುತ್ತಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಭೇಟಿ ನೀಡಿ, ಶುಭ ಹಾರೈಸಿದರು. ಬಳಿಕ, ಪಟ್ಟಣದ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಬಳಿಕ, ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಭೇಟಿ ನೀಡಿದರು. ಬಳಿಕ, ಬಾಳೆಹೊನ್ನೂರಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ವಿರೋಧಿಸಿ ನಡೆದ ರೈತರ ಸಭೆಗೆ ತೆರಳಿ, ಜನರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಮಾತನಾಡಿ, ಜನರ ಭಾವನೆಗಳನ್ನು ಆಧಾರವಾಗಿಟ್ಟುಕೊಂಡು ನಾನು ಎಂದೂ ರಾಜಕಾರಣ ಮಾಡಿಲ್ಲ. ಜನರ ಬದುಕನ್ನು ಆಧಾರವಾಗಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೇನೆ. ಹಾಗಾಗಿ, ಜನರ ಸಮಸ್ಯೆ ಆಲಿಸುವ ಉದ್ದೇಶದಿಂದ ಜನರ ಮುಂದೆ ಬಂದಿದ್ದೇನೆ ಎಂದರು.

ಕೊಟ್ಟ ಅವಕಾಶದಲ್ಲಿ ಪ್ರತಿ ದಿನ ಜನರ ಬದುಕಿನಲ್ಲಿ ಬದಲಾವಣೆ ಮಾಡಬೇಕು ಎಂಬ ದೃಢವಾದ ಸಂಕಲ್ಪ ಮಾಡಿದ್ದೇನೆ. ದೇವರು ವರ ಅಥವಾ ಶಾಪ ಕೊಡುವುದಿಲ್ಲ. ಬದಲಿಗೆ ಅವಕಾಶ ಕೊಡುತ್ತಾನೆ. ನನಗೆ ಅವಕಾಶ ಸಿಕ್ಕಿದೆ. ಸಿಕ್ಕಿರುವ ಅವಕಾಶ ಬಳಸಿಕೊಂಡು ಜನರ ಬದುಕು ಬದಲಿಸುವ ಕೆಲಸ ಮಾಡುತ್ತೇನೆ ಎಂದರು.

ಅಧಿವೇಶನ ನಡೆಯುವಾಗ ವಿರೋಧ ಪಕ್ಷದವರು 10 ದಿನ ಏನು ಚರ್ಚೆ ಮಾಡಲು ಬಿಡಲಿಲ್ಲ. ಹೀಗಾಗಿ ರೈತರಿಗೆ ಮರಣ ಶಾಸನವಾಗಿರುವ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಬಗ್ಗೆಯೇ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆದಿದ್ದೇನೆ. ಇಲ್ಲಿ ಬೇರೆ ಯಾವುದೇ ವಿಷಯ ಚರ್ಚೆಗೆ ಅವಕಾಶವಿಲ್ಲ. ಕೇವಲ ಕರಡು ಅಧಿಸೂಚನೆ ಹಾಗೂ ಬರದ ಕುರಿತು ಮಾತ್ರ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ರಾಜ್ಯದ ರೈತರಿಗೆ ಯಾವುದೇ ರೀತಿ ಸಮಸ್ಯೆಯಾಗಲು ಬಿಡುವುದಿಲ್ಲ. ಒಂದು ವೇಳೆ ಅಂತಹ ಸ್ಥಿತಿ ಬಂದಿದ್ದೆ ಆದಲ್ಲಿ, ಕೇಂದ್ರ ಸರ್ಕಾರದ ಬಳಿಗೆ ಪ್ರತ್ಯೇಕ ನಿಯೋಗ ಕೊಂಡೊಯ್ದು ಜನರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ. ಹೀಗಾಗಿ ಯಾವೊಬ್ಬ ರೈತರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಕರಾವಳಿ ಹಾಗೂ ಮಲೆನಾಡು ಭಾಗದ ಪ್ರವಾಸೋದ್ಯಮದ ಉತ್ತೇಜನಕ್ಕೆ ವಿಶೇಷ ಪಾಲಿಸಿ ರೂಪಿಸಲು ತೀರ್ಮಾನಿಸಲಾಗಿದೆ. ಕೆಲವೇ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವ ಕೆ.ಜೆ.ಜಾರ್ಜ್ ನೂತನ ಪಾಲಿಸಿಯಲ್ಲಿ ಏನಿರಲಿದೆ ಎಂದು ಘೋಷಣೆ ಮಾಡಲಿದ್ದಾರೆ. ಮಲೆನಾಡು ಹಾಗೂ ಕರಾವಳಿಯಲ್ಲಿ ಉದ್ಯೋಗ ಹೆಚ್ಚಬೇಕು. ಬಂಡವಾಳ ಹರಿದು ಬರಬೇಕು. ವಲಸೆ ತಪ್ಪಬೇಕು ಎಂಬ ದೃಷ್ಟಿಯಿಂದ ಹೊಸ ಪಾಲಿಸಿ ರೂಪಿಸಲಾಗಿದೆ ಎಂದು ವಿವರಿಸಿದರು.

ಬಳಿಕ, ಬಾಳೆಹೊನ್ನೂರಿನಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಜಾರಿಯಿಂದ ಆಗಬಹುದಾದ ಪರಿಣಾಮಗಳ ಕುರಿತು ನಡೆದ ಸಾರ್ವಜನಿಕರೊಂದಿಗಿನ ನೇರ ಸಂವಾದ ಸಭೆಯಲ್ಲಿ ಪಾಲ್ಗೊಂಡು, ಮಲೆನಾಡಿಗರ ಮಾತು ಆಲಿಸಿದರು.