ಕನ್ನಡಪ್ರಭ ವಾರ್ತೆ ನವದೆಹಲಿ:

ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಯುಕೆಪಿ 3ನೇ ಹಂತಕ್ಕೆ ತಕರಾರು ಎತ್ತಿರುವ ಹಾಗೂ ತುಂಗಭದ್ರಾ ನೀರಿನ ಪೋಲು ತಡೆಯಲು ಸಹಕಾರ ನೀಡದಿರುವ ಆಂಧ್ರದ ನಡೆ ವಿರುದ್ಧ ಧ್ವನಿ ಎತ್ತಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಮಂಗಳವಾರ ಕಾನೂನು ತಜ್ಞರು ಹಾಗೂ ರಾಜ್ಯ ಸಂಸದರ ಜೊತೆ ಮಾತುಕತೆ ನಡೆಸಿದರು.

ದೆಹಲಿಯ ಕರ್ನಾಟಕ ಭವನದಲ್ಲಿ ಸಭೆ ನಡೆಯಿತು. ಈ ಮಧ್ಯೆ, ಬಾಗಲಕೋಟೆ ಹಾಗೂ ದಾವಣಗೆರೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮಂಗಳವಾರದ ಸಭೆ ಕೇವಲ ಮಾತುಕತೆಗೆ ಸೀಮಿತವಾಯಿತು. ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಕುರಿತು ಸಭೆಯಲ್ಲಿ ವಿವರವಾದ ಚರ್ಚೆ ನಡೆಸಲಾಯಿತು. ಮೇಕೆದಾಟು, ಕೃಷ್ಣಾ ಮೇಲ್ಡಂಡೆ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಸೇರಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾದವು.

‘ಆಲಮಟ್ಟಿ ಡ್ಯಾಮ್‌ನ ಎತ್ತರಕ್ಕೆ ಅವಕಾಶ ನೀಡಬಾರದು. ಯೋಜನೆ ಸಂಬಂಧ ಭೂಸ್ವಾಧೀನ ಮಾಡಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಆಂಧ್ರ ಸಿಎಂ ಪತ್ರ ಬರೆದಿದ್ದಾರೆ’ ಎಂಬ ಅಂಶವನ್ನು ಡಿಕೆಶಿಯವರು ರಾಜ್ಯ ಸಂಸದರ ಗಮನಕ್ಕೆ ತಂದರು. ಅಲ್ಲದೆ, ಯೋಜನೆಗಳ ಸದ್ಯದ ಸ್ಥಿತಿ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಸಭೆಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಬೊಮ್ಮಾಯಿ, ರಾಜ್ಯದ ಹಿತಾಸಕ್ತಿ ವಿಷಯವಾಗಿ ನಾವೆಲ್ಲಾ ಒಟ್ಟಾಗಿ ಇರೋಣ. ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ಅವಕಾಶ ಕೇಳೋಣ. ಸರ್ವಪಕ್ಷಗಳ ಸಂಸದರ ನಿಯೋಗದೊಂದಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡೋಣ. ಇದಕ್ಕೂ ಮೊದಲು, ರಾಜ್ಯ ಸರ್ಕಾರ ಕೆಲವೊಂದು ಕೆಲಸಗಳನ್ನು ಮಾಡಬೇಕಿದೆ. ಅವುಗಳನ್ನು ಪೂರ್ಣಗೊಳಿಸಿದರೆ ನಾವು ಕೇಂದ್ರದ ಮೇಲೆ ಒತ್ತಡ ಹಾಕ್ತೀವಿ ಎಂದು ಸಲಹೆ ನೀಡಿದರು.ಸಂಸದರಿಂದ ಉಪಯುಕ್ತ ಸಲಹೆ: ಡಿಕೆಶಿ:


ಸಂಸದರ ಸಭೆ ಬಳಿಕ ಮಾತನಾಡಿದ ಡಿಕೆಶಿ, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಸಭೆಯಲ್ಲಿ ವಿವರವಾದ ಚರ್ಚೆ ನಡೆಸಲಾಯಿತು. ಕೃಷ್ಣಾ, ಕಾವೇರಿ, ತುಂಗಭದ್ರಾ ಯೋಜನೆಗಳ ಸಣ್ಣ ತೊಡುಕುಗಳು ಪರಿಹಾರ ಆಗುವ ಸಮಯ ಬರುತ್ತಿದೆ. ಕೇಂದ್ರ ಸಚಿವರ ಜೊತೆ ಮಾತಾಡಿ, ಸಭೆಗೆ ಸಮಯ ನಿಗದಿ ಮಾಡಿದ್ದೆ. ಸಭೆಯಲ್ಲಿ 24 ಸಂಸದರು ಭಾಗಿಯಾಗಿದ್ದರು. ಹಲವು ಸಂಸದರು ಉತ್ತಮವಾದ ಸಲಹೆಗಳನ್ನು ನೀಡಿದ್ದಾರೆ. ಕೆಲವು ದಾಖಲೆಗಳು, ಯೋಜನೆಗಳ ಪ್ರಗತಿಯ ಬಗ್ಗೆ ಸಂಸದರಿಗೆ ಮಾಹಿತಿ ನೀಡಿದ್ದೇನೆ. ಎಲ್ಲರೂ ಒಟ್ಟಾಗಿ ಕೇಂದ್ರ ಸಚಿವರು, ಪ್ರಧಾನಿಯನ್ನು ಭೇಟಿಯಾಗೋಣ ಎಂದು ತಿಳಿಸಿದ್ದಾರೆ. ಎತ್ತಿನಹೊಳೆ ಯೋಜನೆ ಜಾರಿಗೆ ತಕ್ಷಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಉಪ ಚುನಾವಣೆ ಹಿನ್ನೆಯಲ್ಲಿ ಈವತ್ತಿನ ಸಭೆ ರದ್ದಾಗಿದ್ದು, ಬಳಿಕ ಮತ್ತೊಂದು ದಿನ ನಿಗದಿ ಮಾಡಲು ಸಂಸದರು ಸಲಹೆ ನೀಡಿದ್ದಾರೆ ಎಂದರು.

ಇದಕ್ಕೂ ಮೊದಲು, ದೆಹಲಿಯ ಕರ್ನಾಟಕ ಭವನದಲ್ಲಿ ಕಾನೂನು ತಜ್ಞರ ಜೊತೆ ಅವರು ಸಭೆ ನಡೆಸಿದರು. ಕಾನೂನ ಸಚಿವ ಎಚ್‌.ಕೆ.ಪಾಟೀಲ್‌, ಎಂ.ಬಿ.ಪಾಟೀಲ್‌, ಬೋಸ್‌ರಾಜ್‌, ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಈ ವೇಳೆ ಹಾಜರಿದ್ದರು.