ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ(ಬಿಡದಿ ಟೌನ್ ಶಿಪ್) ಯೋಜನೆಗೆ ಶೇಕಡ 80ರಷ್ಟು ಕೃಷಿಕರು ಒಪ್ಪಿಗೆ ಸೂಚಿಸಿದ್ದಾರೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಪಪ್ರಚಾರ ಮಾಡಿ ರೈತರ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಗೆ ಶೇ.80ರಷ್ಟು ಭೂ ಮಾಲೀಕರು ಒಪ್ಪಿಗೆ ಸೂಚಿಸಿದ್ದರೆ ರೈತರು 433 ದಿನಗಳಿಂದ ಏಕೆ‌ ತಮ್ಮ‌ ಭೂಮಿ‌ ಉಳಿವಿಗಾಗಿ ರಸ್ತೆಯಲ್ಲಿ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು ಎಂದು ಪ್ರಶ್ನಿಸಿದರು.

ಬೈರಮಂಗಲ ಮತ್ತು ಕಂಚುಗಾರನಹಳ್ಳಿ ವ್ಯಾಪ್ತಿಯಲ್ಲಿ 9600 ಎಕರೆ ಫಲವತ್ತಾದ ನೀರಾವರಿ ಭೂಮಿ ಇದೆ. ಇಲ್ಲಿ ರೈತರು ಒಂದಲ್ಲ‌ ಒಂದು ರೀತಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್ ಇದನ್ನು ಮರೆ ಮಾಚಿ ಯಾವ ರೈತರು ವ್ಯವಸಾಯ ಮಾಡುತ್ತಿಲ್ಲ ಎಂದಿದ್ದಾರೆ. ಅವರು ಸ್ಥಳಕ್ಕೆ ಬಂದರೆ ನಾವು ರೈತರೊ ಇಲ್ಲವೊ ಎಂಬುದನ್ನು ತೋರಿಸುತ್ತೇವೆ ಎಂದು ಹೇಳಿದರು.

ರೈತ ಹಿತರಕ್ಷಣಾ ಸಂಘದಲ್ಲಿ ಒಂದೇ ಪಕ್ಷದ ರೈತರು ಇಲ್ಲ. ಎಲ್ಲಾ ಪಕ್ಷದ ರೈತರು ಇದ್ದಾರೆ. ಹಾಗಾಗಿ ಈ ಹೋರಾಟ ಗಟ್ಟಿಯಾಗಿ ನಿಂತಿದೆ. ನಮ್ಮ ಹೋರಾಟಕ್ಕೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗುತ್ತದೆ ಇದನ್ನು ನೋಡಿ ಡಿ.ಕೆ.ಶಿವಕುಮಾರ್ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿರುವ ಎಲ್ಲಾ ರೈತ ಸಂಘಗಳು ಕನ್ನಡ ಪರ ಹೋರಾಟಗಾರರು ನಮ್ಮ ಹೋರಾಟಕ್ಕೆ ಬೆಂಬಲ ಕೊಡುತ್ತಿದ್ದಾರೆ. ನಮ್ಮಲ್ಲಿ ಒಡಕು ಮೂಡಿಸಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಯೋಜನೆ ವಿಚಾರವಾಗಿ ರಾಜಕೀಯ ನಾಯಕರು ವಾಗ್ಯುದ್ಧ ಮಾಡುತ್ತಿದ್ದಾರೆ. ರೈತರಿಗೆ ರಾಜಕೀಯ ಬೇಡ, ಭೂಮಿ ಬೇಕು ಎಂದು ಹೇಳಿದರು.


ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ಗೆ ಕಾನೂನಿನ ಅರಿವಿಲ್ಲ. ಈ ಯೋಜನೆ ಕಾರ್ಯಗತಗೊಳ್ಳಲು ಸಾಕಷ್ಟು ಕಾನೂನು ಪ್ರಕ್ರಿಯೆಗಳು ನಡೆಯಬೇಕಿದೆ. ಇದ್ಯಾವುದು ಅವರಿಗೆ ಗೊತ್ತಿಲ್ಲ. ನಟರಾಜ್ ರವರು ಡಿ.ಕೆ.ಶಿವಕುಮಾರ್ ಅವರ ಕೀಲು ಗೊಂಬೆಯಾಗಿದ್ದು, ಅವರನ್ನು ಮೆಚ್ಚಿಸಲು ಮಾತನಾಡುತ್ತಿದ್ದಾರೆ ಎಂದು ಯಶವಂತ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಬೈರಮಂಗಲ- ಕಂಚುಗಾರನಹಳ್ಳಿ ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಯ್ಯ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರೆಡ್ಡಿ, ಖಜಾಂಚಿ ಮಂಡಲಹಳ್ಳಿ ನಾಗರಾಜು, ಪದಾಧಿಕಾರಿಗಳಾದ ರಾಮಕೃಷ್ಣ, ಅಶ್ವಥ್, ಕೃಷ್ಣ, ಭಾಗ್ಯ ನಾಗರಾಜು, ಜಯಮ್ಮ, ಸುಮಿತ್ರಮ್ಮ, ಭಾಗ್ಯಮ್ಮ ಇದ್ದರು.

22ಕೆಆರ್ ಎಂಎನ್ 3.ಜೆಪಿಜಿ

ಕರ್ನಾಟಕ ಪ್ರಾಂತ ರೈತಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.