ಕ್ಷೇತ್ರಕ್ಕೆ 150 ಕೋಟಿ ಅನುದಾನ ತಂದಿದ್ದ ಡಿಕೆಸು

| Published : Jun 20 2024, 01:04 AM IST

ಸಾರಾಂಶ

ಮಾಗಡಿ: ಕಳೆದ ಲೋಕಸಭೆ ಚುನಾವಣೆ ಮುನ್ನ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ನಮ್ಮ ತಾಲೂಕಿಗೆ 150 ಕೋಟಿ ಅನುದಾನ ತಂದಿದ್ದರು ಎಂದು ಶಾಸಕ ಬಾಲಕೃಷ್ಣ ಹೇಳಿದರು

ಮಾಗಡಿ: ಕಳೆದ ಲೋಕಸಭೆ ಚುನಾವಣೆ ಮುನ್ನ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ನಮ್ಮ ತಾಲೂಕಿಗೆ 150 ಕೋಟಿ ಅನುದಾನ ತಂದಿದ್ದರು ಎಂದು ಶಾಸಕ ಬಾಲಕೃಷ್ಣ ಹೇಳಿದರು.

ತಾಲೂಕಿನ ಕಲ್ಯಾ ಹಾಗೂ ತಗ್ಗಿಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 20 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೋಟೇಗೌಡನಪಾಳ್ಯ ಬೆಟ್ಟದ ಮಾದೇಶ್ವರಸ್ವಾಮಿ ದೇವಾಲಯದ ಬಳಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಕ್ಷಣಾಗೋಡೆ ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ಕಾಮಗಾರಿಗಳಿಗೆ ಲೋಕಾರ್ಪಣೆ ಹಾಗೂ ವಿದ್ಯುಕ್ತವಾಗಿ ಈಗ ಚಾಲನೆ ನೀಡಲಾಗುತ್ತಿದೆ. ನಮ್ಮ ವಿರೋಧಿಗಳು ಬೋಗಸ್ ಕಾಮಗಾರಿಗಳು ಎನ್ನುತ್ತಿದ್ದರು. ಅವರಿಗೆ ಈಗ ಸಾಕ್ಷಿ ಗುಡ್ಡೆ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ವರ್ಧಿಸುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಮಾಧ್ಯಮಗಳು ನಮಗಿಂತ ಬಹಳ ವೇಗವಾಗಿ ಓಡುತ್ತಿದ್ದು, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಬಂದರೆ ತಿಳಿಸುತ್ತೇನೆ ಎಂದರು. ಕಾಂಗ್ರೆಸ್‌ನವರು ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಸ್ವರ್ಧಿಸಬೇಕಿದ್ದ ವ್ಯಕ್ತಿ ಜೈಲಿಗೆ ಹೋಗಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದು, ಸಿಪಿವೈ ಮಾತಿಗೆ ಗೌರವ ಕೊಡುವುದು ಸೂಕ್ತವಲ್ಲ, ಅವರಿಗೆ ಇಷ್ಟ ಬಂದ ಹಾಗೇ ಮಾತನಾಡುತ್ತಾರೆ. ಇಂತಹವರನ್ನು ನಿಲ್ಲಿಸುತ್ತೇವೆ ಎಂದು ನಾವು ಹೇಳಿಲ್ಲ, ಅವರು ತೆವಲು ತೀರಿಸಿಕೊಳ್ಳಲು ಮಾತನಾಡುತ್ತಾರೆ ಎಂದು ಸಿ.ಪಿ.ಯೋಗೇಶ್ವರ್ ವಿರುದ್ಧ ಬಾಲಕೃಷ್ಣ ಕಿಡಿಕಾರಿದರು.

ಡಿ.ಕೆ.ಸುರೇಶ್ ಅವರು ಸಂಸದರಾಗಿದ್ದ ಸಮಯದಲ್ಲಿ ಅನುದಾನ ತಂದು ಕಾಮಗಾರಿ ಪೂಜೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು, ಈಗಿನ ನೂತನ ಸಂಸದರಾದ ಡಾ.ಸಿ.ಎನ್.ಮಂಜುನಾಥ್ ಅವರು ಅನುದಾನ ತಂದು ಕಾಮಗಾರಿ ಪೂಜೆಗೆ ಕರೆದರೆ ಅವರ ಜೊತೆಗೆ ನಾವೂ ಹೋಗಿ ಚಾಲನೆ ನೀಡುತ್ತೇವೆ. ಅನುದಾನ ತರದೇ ಬರೀ ಮಾತಿನಿಂದ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಅನುದಾನ ತರಲಿ ನಾವು ಅವರ ಜೊತೆ ಕೆಲಸ ಮಾಡುತ್ತೇವೆ ಎಂದರು.

ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ ಎಂದಾಗ ಖುಷಿಯಾಯಿತು, ನೋಡಿದರೆ ಅರಣ್ಯವನ್ನು ಮುಗಿಸುವ ಕೆಲಸಕ್ಕೆ ಸಹಿ ಹಾಕಿದ್ದಾರೆ. ಹಿಂದಿನ ಸರ್ಕಾರ ಅರಣ್ಯ ಉಳಿಯಬೇಕು ಎಂದು ಆ ಕಡತವನ್ನು ರಿಜಕ್ಟ್ ಮಾಡಿತ್ತು. ಅದಕ್ಕೆ ಎಚ್ಡಿಕೆ ಸಹಿ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಜಿಲ್ಲೆಗೆ ಬಂದ ಸಮಯದಲ್ಲಿ ಮೇಕೆದಾಟು ನೀರಾವರಿ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾನು ಗೆದ್ದರೆ ಈ ರಾಜ್ಯದಲ್ಲಿರುವ ಮಹದಾಯಿ, ಮೇಕೆದಾಟು, ಕರಾವಳಿಯಿಂದ ಬಯಲು ಸೀಮೆಗೆ ನೀರು ಹರಿಸುವ ನೀರಾವರಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದಿದ್ದು ಅದರ ಬಗ್ಗೆ ಚಕಾರವೆತ್ತಿಲ್ಲ. ಕೇಂದ್ರದ ಮಂತ್ರಿಯಾಗಿರುವ ಕುಮಾರಸ್ವಾಮಿ ಅವರ ಭಾಷಣದಲ್ಲಿ ರಾಜ್ಯದ ಹಿತ ಪ್ರಸ್ತಾಪವಾಗಿಲ್ಲ ಎಂಬುದು ನೋವು ತಂದಿದೆ ಎಂದರು.

ಹೇಮಾವತಿ ನೀರಾವರಿಗೆ ಅಡ್ಡಿ ಪಡಿಸುತ್ತಿರುವ ತುಮಕೂರು ಜಿಲ್ಲೆಯ ಶಾಸಕರು ಹಾಗೂ ಮುಖಂಡರನ್ನು ಸುಮ್ಮನಿರಿಸುವಂತೆ ನಮ್ಮ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದರು. ಅದರ ಬಗ್ಗೆ ಸಂಸದರು ಹಾಗೂ ಕುಮಾರಸ್ವಾಮಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ತುಮಕೂರು ಜಿಲ್ಲೆಯವರು ಜೂ 25ರಂದು ಮಾಗಡಿ ತಾಲೂಕಿಗೆ ನೀರು ಬಿಡಬಾರದು ಎಂದು ತುಮಕೂರು ಬಂದ್ ನಡೆಸುತ್ತಿದ್ದು, ಸಂಸದ ಸಿ.ಎನ್.ಮಂಜುನಾಥ್ ಅವರ ಚುನಾವಣೆಯಲ್ಲಿ ಗೆದ್ದಿದ್ದು, ಡಿ.ಕೆ.ಸುರೇಶ್ ಅವರು ತಂದಿರುವ ಎಕ್ಸ್‌ಪ್ರೆಸ್‌ ಕೆನಾಲ್ ಕಾಮಗಾರಿ ಪೂರ್ಣಗೊಳಿಸುವ ಇಚ್ಛಾಶಕ್ತಿ ಇದೆಯಾ, ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ನನ್ನ ಹೃದಯ ಎನ್ನುತ್ತಾರೆ ಅವರಿಗೂ ಸಹ ಹೇಮಾವತಿ ನೀರಾವರಿ ತರುವ ಆಲೋಚನೆ ಇದೆಯಾ ಎಂದು ಶಾಸಕರು ಪ್ರಶ್ನಿಸಿದರು.

ಬೃಹತ್ ಕೈಗಾರಿಕಾ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಮಾಗಡಿ ಕ್ಷೇತ್ರಕ್ಕೆ ಬೃಹತ್ ಕೈಗಾರಿಕೆ ತರುತ್ತೇನೆ ಎಂದರೆ ಜಾಗ ನೀಡಲು ಸಿದ್ದ. ಕೃಷಿ ಸಚಿವರಾದ ಚಲುವರಾಯಸ್ವಾಮಿ ನಮ್ಮ ತಾಲೂಕಿಗೆ ವಿಶೇಷವಾಗಿ ರೈತ ತರಬೇತಿ ಕೇಂದ್ರಕ್ಕೆ ಅನುಮೋದನೆ ಕೊಡಿಸಿರುವುದರಿಂದ ತಾಲೂಕು ರೈತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ನನ್ನ ಹುಟ್ಟುರಾದ ಹುಲಿಕಟ್ಟೆಯಲ್ಲಿ 5 ಎಕರೆ ಜಾಗವನ್ನು ರೈತ ತರಬೇತಿ ಕೇಂದ್ರಕ್ಕೆ ಬಿಟ್ಟುಕೊಡುವ ಮೂಲಕ ರೈತರಿಗೆ ಅನುಕೂಲವಾಗುವ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.

ಇದೇ ವೇಳೆ ತಹಸೀಲ್ದಾರ್ ಶರತ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಶೈಲಜಾ, ತಾಪಂ ಮಾಜಿ ಅಧ್ಯಕ್ಷ ನಾರಾಯಣಪ್ಪ, ಮಲ್ಲಿಕಾರ್ಜುನಸ್ವಾಮಿ, ಚನ್ನಮ್ಮನಪಾಳ್ಯ ಭರತ್, ಕಲ್ಯ ಗ್ರಾಪಂ ಅಧ್ಯಕ್ಷ ಬಸವರನಪಾಳ್ಯ ಕುಮಾರ್, ತಗ್ಗೀಕುಪ್ಪೆ ಗ್ರಾಪಂ ಅಧ್ಯಕ್ಷ ರಾಜಣ್ಣ, ಮಾದೇಶ್ವರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ರಂಗಸ್ವಾಮಯ್ಯ, ಜಯರಂಗಯ್ಯ, ಕುರುಪಾಳ್ಯ, ಶಂಕರ್ ಮೋಟೇಗೌಡನಪಾಳ್ಯ ಶ್ರೀನಿವಾಸ್, ಯೋಗಮೂರ್ತಿ, ರಾಜಣ್ಣ, ಹೂಜಗಲ್ ಅರುಣ್ಕುಮಾರ್ ಇತರರಿದ್ದರು.