ರಾಜಧಾನಿಯ ಐಟಿ-ಬಿಟಿ ಪ್ರದೇಶಗಳ ಪಿಜಿಗಳಲ್ಲಿ ದುಬಾರಿ ಮೌಲ್ಯದ ಲ್ಯಾಪ್‌ಟಾಪ್‌ಗಳನ್ನು ಕ‍ಳವು ಮಾಡುತ್ತಿದ್ದ ತಮಿಳುನಾಡಿನ ಸರ್ಕಾರಿ ಶಾಲೆಯ ಶಿಕ್ಷಕಿ ಪುತ್ರ ಸೇರಿದಂತೆ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯ ಐಟಿ-ಬಿಟಿ ಪ್ರದೇಶಗಳ ಪಿಜಿಗಳಲ್ಲಿ ದುಬಾರಿ ಮೌಲ್ಯದ ಲ್ಯಾಪ್‌ಟಾಪ್‌ಗಳನ್ನು ಕ‍ಳವು ಮಾಡುತ್ತಿದ್ದ ತಮಿಳುನಾಡಿನ ಸರ್ಕಾರಿ ಶಾಲೆಯ ಶಿಕ್ಷಕಿ ಪುತ್ರ ಸೇರಿದಂತೆ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಕಲ್ಕುರುಚಿಯ ಗೌತಮ್ ಹಾಗೂ ಆತನ ಸ್ನೇಹಿತ ರಾಜಾದೊರೈ ಬಂಧಿತರಾಗಿದ್ದು, ಆರೋಪಿಗಳಿಂದ 40 ಲಕ್ಷ ರು. ಮೌಲ್ಯದ ವಿವಿಧ ಕಂಪನಿಗಳ ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ದೊಡ್ಡ ತೋಗೂರಿನ ಅಬ್ಬಯ್ಯ ಸ್ಟ್ರೀಟ್‌ನ ಪಿ.ಜಿಯಲ್ಲಿ ಐಟಿ ಕಂಪನಿ ಉದ್ಯೋಗಿ ಲ್ಯಾಪ್‌ಟಾಪ್ ಕಳ್ಳತನವಾಯಿತು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್‌ ಜಿ.ಎಂ. ನವೀನ್ ನೇತೃತ್ವದಲ್ಲಿ ಸಬ್‌ ಇನ್ಸ್‌ಪೆಕ್ಟರ್ ಬಸವರಾಜ ಅಂಗಡಿ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ತಮಿಳುನಾಡಿನಲ್ಲಿ ಸೆರೆಹಿಡಿದು ಕರೆತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬೈ ರಿಟರ್ನ್ಡ್ ಈಗ ಲ್ಯಾಪ್‌ಟಾಪ್ ಕಳ್ಳ: ಡಿಪ್ಲೋಮಾ ಓದಿದ್ದ ಗೌತಮ್‌ ಹಲವು ವರ್ಷಗಳು ದುಬೈನಲ್ಲಿ ಖಾಸಗಿ ಕಂಪನಿಯಲ್ಲಿ ಡಾಟಾ ವಿಶ್ಲೇಷಕನಾಗಿ ಕೆಲಸ ಮಾಡುತ್ತಿದ್ದ. ತಮಿಳುನಾಡಿನ ಸರ್ಕಾರಿ ಶಾಲೆಯಲ್ಲಿ ಆತನ ತಾಯಿ ಶಿಕ್ಷಕಿ ಆಗಿದ್ದಾರೆ. ಹೀಗಿರುವಾಗ ದುಬೈನಲ್ಲಿ ಕೆಲಸ ತೊರೆದು ಮರಳಿದ ಗೌತಮ್‌, ಬಳಿಕ ಸ್ನೇಹಿತ ದೊರೈರಾಜ್ ಜತೆ ಸೇರಿ ಲ್ಯಾಪ್‌ಟಾಪ್‌ ಕಳ್ಳತನಕ್ಕಿಳಿದಿದ್ದ. ಬೆಂಗಳೂರಿನ ಐಟಿ-ಬಿಟಿ ಉದ್ಯೋಗಿಗಳನ್ನು ಈ ಜೋಡಿ ಗುರಿಯಾಗಿಸಿ ಕೃತ್ಯ ಎಸಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಅಂತೆಯೇ ಬೆಂಗಳೂರಿಗೆ ಆಗಮಿಸಿ ಪಿ.ಜಿಗಳಿಗೆ ಥೇಟ್ ಐಟಿ-ಬಿಟಿ ಉದ್ಯೋಗಸ್ಥನಂತೆ ಟಾಕುಠೀಕಾಗಿ ಉಡುಪು ಧರಿಸಿ ದೊರೈ ಹೋಗುತ್ತಿದ್ದ. ಮುಂಜಾನೆ ಕೆಲಸ ಮುಗಿಸಿ ಮರಳುತ್ತಿದ್ದ ಐಟಿ ಉದ್ಯೋಗಿಗಳು, ಪಿ.ಜಿಗಳಲ್ಲಿ ಕೋಣೆ ಬಾಗಿಲು ಹಾಕದೆ ನಿದ್ರೆಗೆ ಜಾರುತ್ತಿದ್ದರು. ಆ ಹೊತ್ತಿನಲ್ಲಿ ಅವರ ಕೋಣೆಗಳಿಗೆ ನುಗ್ಗಿ ಲ್ಯಾಪ್‌ಟಾಟ್ ಎಗರಿಸಿ ಆತ ಪರಾರಿಯಾಗುತ್ತಿದ್ದ.

ಹೀಗೆ ಕಳವು ಮಾಡಿದ ಲ್ಯಾಪ್‌ಟಾಪ್‌ಗಳ ದತ್ತಾಂಶ ಅಳಿಸಿ ಹಾಕಿ ಹೊಸದಾಗಿ ಸಾಫ್ಟ್‌ವೇರ್‌ಗಳನ್ನು ಡೌನ್‌ ಲೋಡ್ ಮಾಡಿ ಗೌತಮ್ ಮಾರಾಟ ಮಾಡುತ್ತಿದ್ದ. ಹೀಗೆ ವರ್ಷದಿಂದ ಲ್ಯಾಪ್‌ಟಾಪ್ ಕಳ್ಳತನ ಕೃತ್ಯದಲ್ಲಿ ಗೌತಮ್ ತಂಡ ತೊಡಗಿದ್ದು, ಕಳೆದ ಡಿ.1 ರಂದು ದೊಡ್ಡ ತೋಗೂರಿನ ಪಿಜಿಯಲ್ಲಿ ಆರೋಪಿಗಳು ಕಳವು ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಶಿಕ್ಷಕಿ ಪುತ್ರ, ಡಿಎಂಕೆ ಶಾಸಕರ ಸಂಬಂಧಿ!

ಗೌತಮ್ ತಾಯಿ ಶಿಕ್ಷಕಿಯಾಗಿದ್ದರೆ, ಅವರ ಸೋದರ ಸಂಬಂಧಿ ಉದಯ್ ಸೂರ್ಯ ಅವರು ತಮಿಳುನಾಡಿನ ಶಂಕರಂಪುರ ಕ್ಷೇತ್ರದ ಆಡಳಿತಾರೂಢ ಡಿಎಂಕೆ ಪಕ್ಷದ ಶಾಸಕರಾಗಿದ್ದಾರೆ. ಹೀಗಾಗಿ ಸ್ಥಳೀಯವಾಗಿ ಗೌತಮ್ ಪ್ರಭಾವ ಹೊಂದಿದ್ದ. ಲ್ಯಾಪ್‌ಟಾಪ್ ಕಳ್ಳತನ ಪ್ರಕರಣದಲ್ಲಿ ಆತನನ್ನು ಬಂಧಿಸಲು ತೆರಳಿದ್ದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರಿಗೆ ಶಾಸಕರ ಬೆಂಬಲಿಗರು ಅಡ್ಡಿಪಡಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸ್ಥಳೀಯ ಪೊಲೀಸರು ಸಹ ಅಸಹಕಾರ ತೋರಿದ್ದಾರೆ.