ಪೌರಕಾರ್ಮಿಕರಿಗೆ ಬಾಕಿ ಪಿಎಫ್‌ಗೆ ಬಡ್ಡಿ ಸೇರಿಸಿ ಕೊಡಿಲ: ಹೈಕೋರ್ಟ್‌

| Published : Feb 16 2024, 01:50 AM IST

ಪೌರಕಾರ್ಮಿಕರಿಗೆ ಬಾಕಿ ಪಿಎಫ್‌ಗೆ ಬಡ್ಡಿ ಸೇರಿಸಿ ಕೊಡಿಲ: ಹೈಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಪೌರಕಾರ್ಮಿಕರಿಗೆ ಬಾಕಿ ಉಳಿಸಿಕೊಂಡಿರುವ ಭವಿಷ್ಯನಿಧಿ (ಪಿಎಫ್​) ವಂತಿಕೆಯ ಒಟ್ಟು ಮೊತ್ತ 90.18 ಕೋಟಿ ರು. ಅನ್ನು ವಾರ್ಷಿಕ ಶೇ.12 ಬಡ್ಡಿಯೊಂದಿಗೆ ಎಂಟು ವಾರಗಳಲ್ಲಿ ಪೌರ ಕಾರ್ಮಿಕರ ಪಿಎಫ್‌ ಖಾತೆಗೆ ಪಾವತಿಸುವಂತೆ ಹೈಕೋರ್ಟ್‌ ನಿರ್ದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೌರಕಾರ್ಮಿಕರಿಗೆ ಬಾಕಿ ಉಳಿಸಿಕೊಂಡಿರುವ ಭವಿಷ್ಯನಿಧಿ (ಪಿಎಫ್​) ವಂತಿಕೆಯ ಒಟ್ಟು ಮೊತ್ತ 90.18 ಕೋಟಿ ರು. ಅನ್ನು ವಾರ್ಷಿಕ ಶೇ.12 ಬಡ್ಡಿಯೊಂದಿಗೆ ಎಂಟು ವಾರಗಳಲ್ಲಿ ಪೌರ ಕಾರ್ಮಿಕರ ಪಿಎಫ್‌ ಖಾತೆಗೆ ಪಾವತಿಸುವಂತೆ ಹೈಕೋರ್ಟ್‌ ನಿರ್ದೇಶಿಸಿದೆ.

ಬಾಕಿ ಉಳಿಸಿಕೊಂಡಿರುವ ಪಿಎಫ್​ ಮೊತ್ತವನ್ನು ಪಾವತಿಸುವಂತೆ ಬಿಬಿಎಂಪಿ ಪೌರಕಾಮಿಕರ ಸಂಘ ಅರ್ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಬಿಬಿಎಂಪಿಯಲ್ಲಿ ಉದ್ಯೋಗದಲ್ಲಿರುವ ಪೌರಕಾರ್ಮಿಕರಿಗೆ 2011ರ ಜನವರಿ ಮತ್ತು 2017ರ ಜುಲೈ ನಡುವಿನ ಅವಧಿಗೆ ಬಾಕಿ ಉಳಿಸಿಕೊಂಡಿದ್ದ ಪಿಎಫ್ ವಂತಿಕೆ ಪಾವತಿಸಲು ನಿರ್ದೇಶಸುವಂತೆ ಕೋರಿ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರಿಗೆ ಬಿಬಿಎಂಪಿ ಪೌರಕಾರ್ಮಿಕರ ಸಂಘವು 2017ರಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಪ್ರಾಧಿಕಾರವು ಬಾಕಿ ಉಳಿಸಿಕೊಂಡಿದ್ದ 90,18,89,719 ರು. ಅನ್ನು ಪೌರ ಕಾರ್ಮಿಕರ ಇಪಿಎಫ್ ಖಾತೆಗಳಿಗೆ ಜಮೆ ಮಾಡುವಂತೆ ಆದೇಶಿಸಿತ್ತು. ಆದರೆ, ಬಿಬಿಎಂಪಿ ಮಾತ್ರ ಆ ಆದೇಶ ಜಾರಿ ಮಾಡಿರಲಿಲ್ಲ. ಇದರಿಂದ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಆದೇಶವನ್ನು ಜಾರಿ ಮಾಡಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಅದರ ವಿಚಾರಣೆ ನಡೆಸಿದ ಹೈಕೋರ್ಟ್‌, ಪೌರ ಕಾರ್ಮಿಕರು ಸಮಾಜಕ್ಕೆ ಉತ್ತಮ ಸೇವೆ ಮಾಡುತ್ತಿದ್ದಾರೆ. ತಮ್ಮ ಸ್ವಂತ ಆರೋಗ್ಯವನ್ನೂ ಲೆಕ್ಕಿಸದೇ ನಿರಂತರವಾಗಿ ಸಾರ್ವಜನಿಕರ ಆರೋಗ್ಯ ರಕ್ಷಿಸಿದ್ದಾರೆ. ಆ ಎಲ್ಲ ಕಾರ್ಮಿಕರು ಸಕಾಲಕ್ಕೆ ಸರಿಯಾದ ವೇತನ ಹಾಗೂ ಇತರೆ ಸೌಲಭ್ಯ ಪಡೆಯುಬೇಕಿದೆ. ಪಿಎಫ್‌ ಪಾವತಿಸದಿರುವುದು ಸಾರ್ವಜನಿಕ ನೀತಿಯ ಉಲ್ಲಂಘನೆ ಮಾಡಿದೆ. ಅಲ್ಲದೆ, ಪೌರಕಾರ್ಮಿಕರ ಮೂಲಭೂತ ಮತ್ತು ಶಾಸನಬದ್ಧ ಜೀವನಕ್ಕೆ ವಿರುದ್ಧವಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.