ಸಾರಾಂಶ
ಕೊಪ್ಪಳ: ಬಾಲ್ಯ ವಿವಾಹ ಮುಕ್ತ ತಾಲೂಕನ್ನಾಗಿಸಲು ಎಲ್ಲ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಕನಕಗಿರಿ ತಹಶೀಲ್ದಾರ ವಿಶ್ವನಾಥ ಮುರಡಿ ಹೇಳಿದರು.ಗಂಗಾವತಿ ತಾಲೂಕು ಸಭಾಂಗಣದಲ್ಲಿ ಕನಕಗಿರಿ ತಾಲೂಕಿನ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಾಲೂಕಿನ ಎಲ್ಲ ದೇವಾಲಯಗಳಲ್ಲಿ ಮುಖ್ಯವಾಗಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎಂಬ ಶಾಶ್ವತ ಗೋಡೆಬರಹ ಬರೆಯಿಸಲು ದೇವಸ್ಥಾನಗಳ ಮುಖ್ಯಸ್ಥರಿಗೆ ಸೂಚನೆ ನೀಡಬೇಕು. ಸಾಮೂಹಿಕ ವಿವಾಹ ಆಯೋಜಕರು ಶಾಶ್ವತ ಗೋಡೆ ಬರಹವನ್ನು ಬರೆಯಿಸುವುದನ್ನು ಸಹ ಒಂದು ಕಡ್ಡಾಯ ಅಂಶವಾಗಿ ಪರಿಗಣಿಸಬೇಕು. ಸಾಮೂಹಿಕ ವಿವಾಹ ಆಯೋಜಕರು ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ನೋಂದಣಿ ಮಾಡಿಸಿರುವ ಸಮಿತಿ/ಸಂಸ್ಥೆಗಳಿಗೆ ಮಾತ್ರವೇ ಸಾಮೂಹಿಕ ವಿವಾಹ ಆಯೋಜನೆಗೆ ಅನುಮತಿಸಬೇಕು ಎಂದರು.ವಿವಾಹದ ಸಲುವಾಗಿ ಯಾರಾದರು ನಕಲಿ ಶಾಲಾ ದೃಢೀಕರಣ ಪತ್ರ ನೀಡಿದಲ್ಲಿ ಅಂತಹ ಶಾಲೆ ಹಾಗೂ ಮುಖ್ಯೋಪಾಧ್ಯಾಯರ ವಿರುದ್ಧ ಶಿಕ್ಷಣ ಇಲಾಖೆ ಕಾನೂನು ರೀತ್ಯಾ ಸೂಕ್ತ ಕ್ರಮಗಳನ್ನು ಜರುಗಿಸಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ಮೇಲಾಗುವ ಯಾವುದೇ ರೀತಿಯ ಅಪರಾಧಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರವು ರಾಜ್ಯ ಮಕ್ಕಳ ರಕ್ಷಣಾ ನೀತಿ-2016ರಡಿ ಶೈಕ್ಷಣಿಕ ಸಂಸ್ಥೆಗಳಿಗಾಗಿ ರೂಪಿಸಲಾಗಿರುವ ಕಾರ್ಯನಿರ್ವಹಣಾ ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನಗಳನ್ನು ಜಾರಿಗೊಳಿಸಿದೆ ಎಂದರು.ಮಕ್ಕಳ ನ್ಯಾಯ ಕಾಯ್ದೆ-2015ರಡಿಯಲ್ಲಿ ಬಾಲಭಿಕ್ಷಾಟನೆ ಶಿಕ್ಷಾರ್ಹ ಅಪರಾಧವಾಗಿದೆ. ತಾಲೂಕಿನಲ್ಲಿ ಬಾಲ ಭಿಕ್ಷಾಟನೆ ಪಿಡುಗು ಇದ್ದು, ಸಮಾಜ ಕಲ್ಯಾಣ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಅನಿರೀಕ್ಷಿತ ದಾಳಿಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಬಾಲ ಮತ್ತು ಕಿಶೋರ ಕಾರ್ಮಿಕರ ಪತ್ತೆಗಾಗಿ ನಿಯಮಿತವಾಗಿ ಅನಿರೀಕ್ಷಿತ ದಾಳಿಗಳನ್ನು ಆಯೋಜಿಸುವುದು, ಪತ್ತೆಯಾದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಪೋಷಣೆ ಮತ್ತು ರಕ್ಷಣೆಗೆ ಹಾಜರಪಡಿಸುವುದು ಕಡ್ಡಾಯವೆಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.ಗ್ರಾಪಂ ಮಟ್ಟದಲ್ಲಿ ಮಕ್ಕಳ ಸ್ನೇಹಿ ವಾತಾವರಣ ಮತ್ತು ಮಕ್ಕಳ ಪರವಾದ ಪಂಚಾಯತ್‌ಗಳನ್ನಾಗಿಸಲು ಪ್ರತಿ ಗ್ರಾಪಂಗಳಲ್ಲಿ ಕನಿಷ್ಠ 3 ತಿಂಗಳಿಗೊಮ್ಮೆ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳ ಸಭೆಯನ್ನು ಮತ್ತು ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಕಡ್ಡಾಯವಾಗಿ ಆಯೋಜಿಸುವಂತೆ ತಾಪಂ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಗಂಗಾವತಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶರಣಪ್ಪ ನಾಯ್ಕ, ಕನಕಗಿರಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುಪಾಕ್ಷಿ, ವೈದ್ಯಾಧಿಕಾರಿ ಡಾ.ಗೌರಿಶಂಕರ, ಕಾರ್ಮಿಕ ನಿರೀಕ್ಷಕ ಗೋಪಾಲ ಧೂಪದ್, ಕನಕಗಿರಿ ಶಿಕ್ಷಣ ಸಂಯೋಜಕ ಅಂಜನಯ್ಯ, ಗಂಗಾವತಿ ಗ್ರಾಮೀಣ ಠಾಣೆ ಎಎಸ್‌ಐ ಪ್ರಕಾಶ ಉಮಚಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತರಾದ ರವಿ ಪವಾರ್, ಯಮನಮ್ಮ, ಕನಕಗಿರಿ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಚಂದ್ರಕಲಾ ಹೆಗಡೆ, ಪೋಷಣ್ ತಾಲೂಕು ಸಂಯೋಜಕ ಯಮನೂರಪ್ಪ ಉಪಸ್ಥಿತರಿದ್ದರು.