ಸಮಗ್ರ ಕೃಷಿ ಮಾಡಿ ಅಧಿಕ ಆದಾಯ ಗಳಿಸಿ

| Published : Jun 26 2024, 12:40 AM IST

ಸಾರಾಂಶ

ಮಾಗಡಿ: ರೈತರು ಸಮಗ್ರ ಬೇಸಾಯ ಮಾಡುವುದರಿಂದ ಆರ್ಥಿಕ ಸುಧಾರಣೆ ಸಾಧ್ಯ ಎಂದು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಮಾರೇಗೌಡ ತಿಳಿಸಿದರು.

ಮಾಗಡಿ: ರೈತರು ಸಮಗ್ರ ಬೇಸಾಯ ಮಾಡುವುದರಿಂದ ಆರ್ಥಿಕ ಸುಧಾರಣೆ ಸಾಧ್ಯ ಎಂದು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಮಾರೇಗೌಡ ತಿಳಿಸಿದರು.

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೃಷಿಕ ಸಮಾಜದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮುಂಗಾರು ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ಇಲಾಖೆ ಪೂರೈಸುತ್ತಿದೆ. ಅಗತ್ಯ ದಾಖಲೆಗಳನ್ನು ಇಲಾಖೆಗೆ ಒದಗಿಸುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

ಕೃಷಿಕ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಸಹ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ರೈತರಿಗೆ ಇಲಾಖೆಯ ಸವಲತ್ತುಗಳನ್ನು ಜನಜಾಗೃತಿಗೊಳಿಸಬೇಕಿದೆ. ನರೇಗಾ ಯೋಜನೆ ರೈತರಿಗೆ ವರದಾನವಾಗಿದೆ. ಹಸಿರು ಕ್ರಾಂತಿಯ ಜತೆಗೆ ಆಹಾರ ಕ್ರಾಂತಿಗೂ ಆದ್ಯತೆ ಕೊಡಬೇಕೆಂದು ಮನವಿ ಮಾಡಿದರು.

ಶೈಕ್ಷಣಿಕ ಪ್ರವಾಸ:

ಕೃಷಿಕ ಸಮಾಜದ ಅಧ್ಯಕ್ಷರು, ಕಾರ್ಯದಶಿಗಳು ಹಾಗೂ ನಿರ್ದೇಶಕರು ಹಾಗೂ ಅಧಿಕಾರಿಗಳು ಸೇರಿ ಸಮಗ್ರ ಕೃಷಿ ಅಧ್ಯಯಾನಕ್ಕೆ 3 ದಿನಗಳ ಕಾಲ ಪ್ರವಾಸ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ಸಮಾಜದ ಅಧ್ಯಕ್ಷ ಉಮೇಶ್ ತಿಳಿಸಿದರು.

ಸಾಮಾಜಿಕ ಅರಣ್ಯಾಧಿಕಾರಿ ಕೆ.ಟಿ.ಮಂಜುನಾಥ್ ಮಾತನಾಡಿ, ಮನಷ್ಯನಿಗೆ ಗಾಳಿ, ನೀರು ಆಹಾರ ಎಷ್ಟು ಮುಖ್ಯವೋ ಅದಕ್ಕೆ ಅರಣ್ಯೀಕರಣವೂ ಅಷ್ಟೆ ಅವಶ್ಯಕ. ನಮಗೆ ಅಗತ್ಯ ಆಮ್ಲಜನಕ ಬೇಕಾದರೆ ಮರ, ಗಿಡಗಳನ್ನು ಹೆಚ್ಚಾಗಿ ಬೆಳಸಬೇಕಿದೆ. ಭೌಗೋಳಿಕವಾಗಿ ಶೇ.33ರಷ್ಟು ಅರಣ್ಯೀಕರಣವಿರಬೇಕು. ಈಗ ಕೇವಲ ಶೇ.22ರಷ್ಟು ಮಾತ್ರ ಇರುವುದು, ಭೂದಾಹಿಗಳು ಕಾಡೆಲ್ಲ ಒತ್ತುವರಿ ಮಾಡಿಕೊಂಡಿದ್ದಾರೆ. ಈಗ ಇರುವುದೊಂದೇ ದಾರಿ ರೈತರ ಭೂಮಿಯಲ್ಲಿಯೇ ಮರಗಿಡ ಬೆಳೆಸಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. ರೈತರು ಕೃಷಿ ಜತೆಗೆ ತೋಟಗಾರಿಕೆ, ಅರಣ್ಯ ಗಿಡಮರ ಬೆಳಸಿ, ಆರ್ಥಿಕ ಮಟ್ಟದ ಸುಧಾರಣೆ ಜತೆಗೆ ಆರೋಗ್ಯ ಸುಧಾರಣೆಗೂ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕಿ ವಿಜಯ ಸವಣೂರು ಮಾತನಾಡಿ, ರೈತರಿಗೆ ಸರ್ಕಾರ ಒದಗಿಸುವ ಸಹಾಯಧನ ಸವಲತ್ತುಗಳನ್ನು ಕಾಲಕಾಲಕ್ಕೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ರಾಗಿ, ಭತ್ತ, ತೊಗರಿ, ಅಲಸಂದೆ, ಅವರೆ ಬೀಜ ಪೂರೈಕೆ ಮಾಡಲಾಗುತ್ತಿದೆ. ಜತೆಗೆ ಸಹಾಯಧನದಲ್ಲಿ ಲಘು ಪೋಷಕಾಂಶ, ಯಂತ್ರೋಪಕರಣಗಳನ್ನು ಒದಗಿಸಿ ತಾಂತ್ರಿಕ ಸಮಗ್ರ ಕೃಷಿ ಬೇಸಾಯದ ಕ್ರಮವನ್ನು ಅಳವಡಿಸಿಕೊಂಡು ಅಧಿಕ ಇಳುವರಿ ಪಡೆದು ಆಹಾರ ಉತ್ಪಾದನೆ ಮಾಡಬೇಕೆಂದು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಕೆವಿಕೆ ಮುಖ್ಯಸ್ಥೆ ಲತಾ ಕುಲಕರ್ಣಿ, ತೋಟಗಾರಿಕೆ ಅಧಿಕಾರಿ ಪ್ರಕಾಶ್, ರೇಷ್ಮೆ, ಪಶುಸಂಗೋಪನೆ ಇಲಾಖೆ ಅಧಿಕಾರಿ ಚಿಕ್ಕಹನುಮಯ್ಯ ಮಾತನಾಡಿದರು. ಕೃಷಿ ತಾಂತ್ರಿಕ ಅಧಿಕಾರಿ ಎಂ.ಮಹೇಶ್, ಕೃಷಿಕ ಸಮಾಜದ ನಿರ್ದೇಶಕರಾದ ಗೋವಿಂದರಾಜು, ರಂಗಸ್ವಾಮಯ್ಯ, ಬಸವನಪಾಳ್ಯದ ಲೋಕೇಶ್, ದೇವರಾಜು, ಅರುಣ್, ಅಜಯ್, ರವಿ, ಟಿ.ಎಂ.ಶ್ರೀನಿವಾಸ್ ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೃಷಿಕ ಸಮಾಜದ ಸಾಮಾನ್ಯ ಸಭೆ

ಯಲ್ಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಮಾರೇಗೌಡ ಮಾತನಾಡಿದರು.