ಬಾಲ್ಯ ವಿವಾಹಕ್ಕೆ ಆಸ್ಪದ ಕೊಡಬೇಡಿ

| Published : Aug 13 2025, 12:30 AM IST

ಸಾರಾಂಶ

ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಬಾಲ್ಯ ವಿವಾಹ ತಡೆ ಕುರಿತು ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಾಲ್ಯ ವಿವಾಹ ಮಾಡುವುದರಿಂದ ಬಾಲ ಗರ್ಭಿಣಿಯರಾಗಿ ಹೆರಿಗೆ ಸಮಯದಲ್ಲಿ ಸತ್ತು ಹುಟ್ಟಿದ ಮಕ್ಕಳ ಜನನ, ಮಕ್ಕಳು ಅಂಗವಿಕಲರಾಗುವ ಸಂಭವ, ಇಲ್ಲವೇ ತಾಯಿ ಮರಣ, ಶಿಶು ಮರಣ ಸಂಭವಿಸುವ ಸಾಧ್ಯತೆ ಇರುವುದರಿಂದ ಬಾಲ್ಯ ವಿವಾಹಕ್ಕೆ ಆಸ್ಪದ ನೀಡಬೇಡಿ ಎಂದು ಚಿತ್ರದುರ್ಗ ತಾಲೂಕು ಆರೋಗ್ಯ ಅಧಿಕಾರಿ ಡಾ. ಬಿ.ವಿ ಗಿರೀಶ್ ಹೇಳಿದರು.

ತಾಲೂಕಿನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಬಾಲ್ಯ ವಿವಾಹ ತಡೆ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

18 ವರ್ಷದೊಳಗೆ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು, ಮಾಡಿಸುವುದು, ಅದಕ್ಕೆ ಸಾಕ್ಷಿಯಾಗುವುದು, ಭಾಗವಹಿಸುವುದು ಶಿಕ್ಷಾರ್ಹ ಅಪರಾಧ. ಪೂಜಾರಿ ಸೇರಿದಂತೆ ಸಂಬಂಧಪಟ್ಟವರಿಗೆಲ್ಲಾ ಎರಡು ವರ್ಷ ಜೈಲು, 1 ಲಕ್ಷ ರು.ದಂಡ ವಿಧಿಸಲಾಗುವುದು. ಸಾರ್ವಜನಿಕ ವಲಯಗಳಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರು ಮೂಡಿಸಬೇಕು ಎಂದರು. ಕ್ಷೇತ್ರಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, 18 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರೆ ಆಗಿನ್ನೂ ಗರ್ಭಕೋಶದ ಬೆಳವಣಿಗೆ ಆಗಿರುವುದಿಲ್ಲ. ಬಾಲ್ಯ ವಿವಾಹದಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿದ್ದು ಹೆಚ್ಚು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಗರ್ಭಪಾತದ ಸಾಧ್ಯತೆ ಹೆಚ್ಚು. ಬೇಗ ವಯಸ್ಸಾದಂತೆ ಕಾಣುತ್ತಾರೆ. ಹೆರಿಗೆ ಸಮಯದಲ್ಲಿ ಅತ್ಯಂತ ಕಷ್ಟಕರವಾದ ಹೆರಿಗೆ ಮತ್ತು ಅತಿಯಾದ ರಕ್ತಸ್ರಾವದಿಂದ ಅಪಾಯ ಸಂಭವಿಸಬಹುದು. ಬಾಲ್ಯ ವಿವಾಹ ಮಾಡಬೇಡಿ ಮನೆಯ ಮಗಳನ್ನು ಸಾವಿನ ದವಡೆಗೆ ದೂಡಬೇಡಿ. ಬಾಲ್ಯ ವಿವಾಹ ಕಂಡುಬಂದರೆ 1098ಕ್ಕೆ ಕರೆ ಮಾಡಿ. ಕರೆ ಮಾಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.

ಈ ವೇಳೆ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ನಳಿನಾಕ್ಷಿ, ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಹೇಶ್, ಫಾರ್ಮಸಿ ಅಧಿಕಾರಿ ಶಶಿಧರ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಟಿ. ನಿರ್ಮಲ ಹಾಗೂ ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಹಾಜರಿದ್ದರು.