ಕೋಮು ಸೌಹಾರ್ದತೆಗೆ ದಕ್ಕೆಯಾಗುವ ಕಾರ್‍ಯಕ್ರಮ ಪ್ರಸಾರ ಬೇಡ: ಡಿಸಿ ಗೋವಿಂದರೆಡ್ಡಿ

| Published : Feb 09 2024, 01:48 AM IST

ಸಾರಾಂಶ

ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಹಾಗೂ ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ ನಿಯಮಗಳ ಪ್ರಕಾರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ಬೀದರ್‌ನಲ್ಲಿ ನಡೆದಜಿಲ್ಲಾಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆಯಲ್ಲಿ ಡಿಸಿ ಗೋವಿಂದ ರೆಡ್ಡಿ ಸೂಚನೆ.

ಕನ್ನಡಪ್ರಭ ವಾರ್ತೆ ಬೀದರ್‌

ಸ್ಥಳೀಯ ಕೇಬಲ್‌ ಟೆಲಿವಿಷನ್ ಚಾನಲಗಳಲ್ಲಿ ಸ್ಥಳೀಯ ಸುದ್ದಿಗಳನ್ನು ಮಾತ್ರ ಪ್ರಸಾರ ಮಾಡುವುದರ ಜೊತೆಗೆ ಯಾವುದೇ ಸಮುದಾಯಕ್ಕೆ ಭಂಗವನ್ನುಂಟು ಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟಿವಿಗಳಲ್ಲಿ ಕೇವಲ ಒಳ್ಳೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು ಮತ್ತು ಯಾವುದೇ ಅಶ್ಲೀಲ ಚಿತ್ರಗಳ ಪ್ರಸಾರ, ಸಮುದಾಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು. ಹಾಗೇನಾದರು ಮಾಡಿದ್ದಲ್ಲಿ ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ ಅಧಿನಿಯಮ 1995 ರ ಪ್ರಕಾರ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದರು.

ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಹಾಗೂ ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ ನಿಯಮಗಳ ಪ್ರಕಾರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ಬೀದರ್‌ ಜಿಲ್ಲೆಯಲ್ಲಿ ಯಾವುದೇ ನಕಲಿ ಕೇಬಲ್‌ ಟಿವಿಗಳ ಪ್ರಸಾರ ಕುರಿತು ಸಾರ್ವಜನಿಕರಿಂದ ದೂರುಗಳೇನಾದರು ಕಂಡು ಬಂದಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕೇಬಲ ಟೆಲಿವಿಷನ್ ಚಾನಲ್‌ಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೆ ಸಾರ್ವಜನಿಕರು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಬೀದರ್‌ನಲ್ಲಿರುವ ದೂರು ಕೋಷದಲ್ಲಿ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. ಈ ಮಾಹಿತಿಯನ್ನು ಸ್ಥಳೀಯ ಕೇಬಲ್ ಟಿವಿಗಳಲ್ಲಿ ಹೆಡಲೈನ್‌ ಮೂಲಕ ಸಾರ್ವಜನಿಕರ ಗಮನಕ್ಕೆ ತರಬೇಕೆಂದು ಹೇಳಿದರು.

ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ಮೊತ್ತದಷ್ಟೆ ಹಣವನ್ನು ಗ್ರಾಹಕರಿಂದ ಪಡೆಯಬೇಕು. ಅದಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ. ಹಾಗೂ ಫ್ರೀ ಟು ಏರ್ ಉಚಿತ ಚಾನಲ್‌ಗಳಿಗೆ ಹಣ ಪಡೆಯದೆ ಪ್ರಸಾರ ಮಾಡಬೇಕು.

ಸ್ಥಳಿಯ ಕೇಬಲ್‌ ಟೆಲಿವಿಷನ್‌ಗೆ ಸಂಬಂಧಿಸಿದ ಯಾವುದೇ ದೂರುಗಳು ಬಂದರೆ ತಕ್ಷಣ ಕ್ರಮ ವಹಿಸುವಂತೆ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಸುರೇಶ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳುವ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಸ್ಥಳೀಯ ಚಾನಲ್‌ಗಳಲ್ಲಿ ಪ್ರಸಾರ ಮಾಡಬೇಕು. ಇದರಿಂದ ಜನರಲ್ಲಿ ಜಾಗೃತಿ ಉಂಟಾಗುತ್ತದೆ ಎಂದು ಹೇಳಿದರು.

ಈ ಸಭೆಯಲ್ಲಿ ಕರ್ನಲ್ ಶರಣಪ್ಪ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಮನೋಜಕುಮಾರ, ಶಂಬುಲಿಂಗ ವಾಲದೊಡ್ಡಿ, ಡಾನ ಬಾಸ್ಕೋ ಸಂಸ್ಥೆಯ ಪಾಧರ ಜಾರ್ಜ, ನವೀನ ಪಬ್ಲಿಕ್ ಶಾಲೆಯ ಮುಖ್ಯಸ್ಥರಾದ ರತ್ನ ಪಾಟೀಲ, ಮನಶಾಸ್ತ್ರಜ್ಞರಾದ ಮಲ್ಲಿಕಾರ್ಜುನ ಎಸ್. ಗುಡ್ಡೆ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಸುರೇಶ, ವಿಜಯ ಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.