ಸಾರಾಂಶ
ತಾಲೂಕಿನ ಪಿಗ್ಮಿ ಸಂಗ್ರಹಕಾರರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಮಾಡಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡದಂತೆ ಪಿಗ್ಮಿ ಸಂಗ್ರಹಕಾರರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಹೊನ್ನಾವರದಲ್ಲಿ ತಹಸೀಲ್ದಾರರಿಗೆ ಪಿಗ್ಮಿ ಸಂಗ್ರಹಕಾರರ ಮನವಿಕನ್ನಡಪ್ರಭ ವಾರ್ತೆ ಹೊನ್ನಾವರ
ತಾಲೂಕಿನ ಪಿಗ್ಮಿ ಸಂಗ್ರಹಕಾರರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಮಾಡಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡದಂತೆ ಪಿಗ್ಮಿ ಸಂಗ್ರಹಕಾರರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಕೆಲವು ಪಿಗ್ಮಿ ಸಂಗ್ರಹಕಾರರು ಪದವಿ, ಮಾಸ್ಟರ್ ಡಿಗ್ರಿಯನ್ನು ಹೊಂದಿದ್ದರೂ ಸೂಕ್ತ ಉದ್ಯೋಗ ಸಿಗದೇ ಜೀವನೋಪಾಯಕ್ಕಾಗಿ ಪಿಗ್ಮಿ ಸಂಗ್ರಹಣೆ ಮಾಡುತ್ತಿದ್ದಾರೆ. ಕಳೆದ 25-30 ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬಂದಿದ್ದರೂ ಬ್ಯಾಂಕುಗಳು ನಮಗೆ ವೇತನ ನೀಡುವುದಿಲ್ಲ. ನಾವು ಸಂಗ್ರಹಿಸಿದ ಹಣದ ಮೇಲೆ ನಮಗೆ ಕಮಿಷನ್ ಮಾತ್ರ ನೀಡುತ್ತದೆ. ಪಿಗ್ಮಿ ಸಂಗ್ರಹ ಮಾಡಿ ಅದರಿಂದ ಬಂದಿರುವ ಕಮಿಷನ್‌ನಿಂದ ಕುಟುಂಬದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಅನಾರೋಗ್ಯದ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಇರುವುದರಿಂದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತಿತ್ತು. ಈಗ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗುವುದಿಲ್ಲ. ಬ್ಯಾಂಕಿನಿಂದಲೂ ಯಾವುದೇ ರೀತಿಯ ಪಿಎಫ್ ಗ್ರಾಜ್ಯುಟಿ, ವೇತನ ಹೀಗೆ ಯಾವುದೇ ರೀತಿಯ ಸೌಲಭ್ಯವೂ ಇರುವುದಿಲ್ಲ.ನಮಗೆ ಸಿಗುವ ಕಮಿಷನ್‌ನಿಂದ ನಮ್ಮ ಸಂಸಾರ ನಡೆಸುವುದೇ ಕಷ್ಟ ಆಗಿದೆ. ಹೀಗಿದ್ದಾಗ ಬಡ ಪಿಗ್ಮಿ ಏಜೆಂಟರ್ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ನಮ್ಮ ಸಂಸಾರ ದಾರಿ ಮೇಲೆ ಬರುತ್ತದೆ. ಮಾನವೀಯ ನೆಲೆಯಿಂದ ಪಿಗ್ಮಿ ಏಜೆಂಟರ್ ಬಿಪಿಎಲ್ ಕಾರ್ಡ್ ರದ್ದು ಮಾಡಬಾರದೆಂದು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭ ಪಿಗ್ಮಿ ಸಂಗ್ರಹಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ನಾಯ್ಕ ಮಂಕಿ, ಅಧ್ಯಕ್ಷ ಜುಜೆ ಫರ್ನಾಂಡಿಸ್, ಉಪಾಧ್ಯಕ್ಷ ಉದಯ ನಾಯ್ಕ, ಏಜಂಟರಾದ ರಾಘವೇಂದ್ರ ನಾಯ್ಕ, ಗಣಪತಿ ನಾಯ್ಕ, ಸತೀಶ್ ನಾಯ್ಕ ಮಾಳ್ಕೋಡ, ರಾಮಕೃಷ್ಣ ಶೆಟ್ಟಿ, ಶೇಖರ್ ನಾಯ್ಕ, ಗಣಪಯ್ಯ ಗೌಡ, ಗಜಾನನ ನಾಯ್ಕ, ರಾಜೇಶ ಪ್ರಭು, ಶ್ಯಾಮಲಾ ಶೆಟ್ಟಿ, ನಾಗರಾಜ ನಾಯ್ಕ, ಕೃಷ್ಣ ಶೆಟ್ಟಿ, ಗಿರೀಶ ನಾಯ್ಕ, ಶ್ರೀಧರ ನಾಯ್ಕ, ಈಶ್ವರ ನಾಯ್ಕ ಇತರರಿದ್ದರು.