ಯಾವುದೇ ಕಾರಣಕ್ಕೂ ಕ್ರಿಯಾಯೋಜನೆ ರದ್ದುಪಡಿಸದಿರಿ

| Published : Sep 03 2024, 01:33 AM IST

ಯಾವುದೇ ಕಾರಣಕ್ಕೂ ಕ್ರಿಯಾಯೋಜನೆ ರದ್ದುಪಡಿಸದಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಸದಸ್ಯೆ ಅಶ್ವಿನಿ ಅಂಕಲಕೋಟಿ ಮಾತನಾಡಿ, ಪೌರಾಡಳಿತ ಸಚಿವ ಯು.ಟಿ.ಖಾದರ್ ಲಕ್ಷ್ಮೇಶ್ವರಕ್ಕೆ ಬಂದ ಸಂದರ್ಭದಲ್ಲಿ ಅಪೂರ್ಣಗೊಂಡ ಸಿಸಿ ರಸ್ತೆ ಮತ್ತು ಊರಿನ ಅಭಿವೃದ್ಧಿಗೆ ಐದು ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ

ಲಕ್ಷ್ಮೇಶ್ವರ: 2024-25 ನೇ ಸಾಲಿನ ಪಟ್ಟಣದ ಪುರಸಭೆಯ ೧೫ನೇ ಹಣಕಾಸು ಅನುದಾನದ ₹೭೬ ಲಕ್ಷಗಳ ಕ್ರಿಯಾ ಯೋಜನೆಯನ್ನು ಯಾವುದೇ ಕಾರಣಕ್ಕೂ ರದ್ದು ಪಡಿಸಬಾರದು ಎಂದು ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ ಆಗ್ರಹಿಸಿದರು.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಯಾ ಯೋಜನೆ ಅನುಮೋದನೆ ಆಗುವಾಗ ಪುರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಡಳಿತ ಇರಲಿಲ್ಲ. ಆಗ ಸಿದ್ಧಗೊಂಡ ಕ್ರಿಯಾ ಯೋಜನೆ ಈಗಾಗಲೇ ಅನುಮೋದನೆಗೊಂಡು ಟೆಂಡರ್ ಕೂಡ ಕರೆಯಲಾಗಿದೆ. ಆದರೆ ಆಡಳಿತ ಪಕ್ಷದ ಸದಸ್ಯರು ಕ್ರಿಯಾ ಯೋಜನೆ ರದ್ದು ಮಾಡುವಂತೆ ಆಗ್ರಹಿಸುತ್ತಿದ್ದಾರೆ.ಆದ್ದರಿಂದ ಪುರಸಭೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕ್ರಿಯಾ ಯೋಜನೆ ರದ್ದು ಪಡಿಸಬಾರದು. ಚಾವಡಿಯಿಂದ ಕೆಂಚಲಾಪುರದವರೆಗೆ ಅಪೂರ್ಣಗೊಂಡ ಸಿಸಿ ರಸ್ತೆ ಮುಂದಿನ ದಿನಗಳಲ್ಲಿ ಬರುವ ಅನುದಾನದಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯೆ ಅಶ್ವಿನಿ ಅಂಕಲಕೋಟಿ ಮಾತನಾಡಿ, ಪೌರಾಡಳಿತ ಸಚಿವ ಯು.ಟಿ.ಖಾದರ್ ಲಕ್ಷ್ಮೇಶ್ವರಕ್ಕೆ ಬಂದ ಸಂದರ್ಭದಲ್ಲಿ ಅಪೂರ್ಣಗೊಂಡ ಸಿಸಿ ರಸ್ತೆ ಮತ್ತು ಊರಿನ ಅಭಿವೃದ್ಧಿಗೆ ಐದು ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ.ಆದರೂ ಸಹ ಆಡಳಿತ ಪಕ್ಷದ ಸದಸ್ಯರು ಸದ್ಯ ಅನುಮೋದನೆಗೊಂಡಿರುವ ಕ್ರಿಯಾ ಯೋಜನೆ ರದ್ದುಪಡಿಸಿ ಆ ಹಣದಲ್ಲಿ ಬಜಾರ್ ರಸ್ತೆಯ ಬಾಕಿ ಉಳಿದಿರುವ ರಸ್ತೆಯನ್ನು ಸಿಸಿ ರಸ್ತೆ ಮಾಡಬೇಕು ಎಂದು ಹೇಳುತ್ತಿದ್ದಾರೆ.ಅಂದರೆ ಅವರಿಗೆ ತಮ್ಮ ಕಾಂಗ್ರೆಸ್ ಪಕ್ಷದ ಸಚಿವರ ಮೇಲೂ ವಿಶ್ವಾಸ ಇಲ್ಲ ಎಂದು ತಿಳಿಸಿದ ಅವರು, ಸದ್ಯ ಅನುಮೋದನೆ ಆಗಿರುವ ಕ್ರಿಯಾ ಯೋಜನೆ ರದ್ದುಪಡಿಸಬಾರದು ಎಂದರು.

ಈ ವೇಳೆ ಸದಸ್ಯರಾದ ವಾಣಿ ಹತ್ತಿ, ಪೂರ್ಣಿಮಾ ಪಾಟೀಲ, ಮಹಾದೇವಪ್ಪ ಅಣ್ಣಿಗೇರಿ, ಕವಿತಾ ಶೆರಸೂರಿ, ಪೂಜಾ ಖರಾಟೆ ಇದ್ದರು.