ಸಾರಾಂಶ
ಹರಪನಹಳ್ಳಿ: ದೇಶದ ಪ್ರಗತಿಗೆ ವಿಜ್ಞಾನ ಅಗತ್ಯ ಹಾಗೂ ಅನಿವಾರ್ಯತೆ ಇದೆ. ಆದರೆ, ವೈಜ್ಞಾನಿಕತೆ ಹೆಸರಿನಲ್ಲಿ ಧರ್ಮದ ವೈಚಾರಿಕತೆಗೆ ಧಕ್ಕೆ ಆಗದಿರಲಿ ಎಂದು ಪಂಚಪೀಠದಲ್ಲೊಂದಾದ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಚಿಕ್ಕಮೇಗಳಗೆರೆ ಗ್ರಾಮದ ರೇವಣಸಿದ್ದೇಶ್ವರ ಹಾಗೂ ವೀರಾಂಜನೇಯ ದೇವಸ್ಥಾನಗಳ ಕಳಸಾರೋಹಣ ಮತ್ತು ಆದಿ ಬಸವೇಶ್ವರ ದೇವಸ್ಥಾನ ಅಡಿಗಲ್ಲು ಸಮಾರಂಭದ ಅಂಗವಾಗಿ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶೈಕ್ಷಣಿಕ, ಆರ್ಥಿಕತೆ ಹಾಗೂ ಧಾರ್ಮಿಕ ಚಿಂತನೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ. ದೇವರಲ್ಲಿ ನಂಬಿಕೆ ಇಲ್ಲದ ಜನಗಳ ನಡುವೆ ದೇವರ ಸಾಕ್ಷಾತ್ಕಾರ ಭಾವನೆ ಮೂಡುವಂತಾಗಲಿ ಎಂದು ಅವರು ಅಭಿಪ್ರಾಯಪಟ್ಟರು.ಗಾಳಿ, ನೀರು, ಆಹಾರ ದೇವರು ನೀಡಿದ ಕೊಡುಗೆ ಬೇರೆ ಯಾರಿಂದಲೂ ನೀಡಲು ಸಾಧ್ಯವಿಲ್ಲ. ದೇವರ ಕೊಡುವಿಕೆಯ ಪ್ರತಿಯಾಗಿ ಮನುಷ್ಯ ಭಕ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ರಂಭಾಪುರಿ ಮಠದ ಲಿಂಗೈಕ್ಯ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನದ ಅಂಗವಾಗಿ ಡಿ. 15ರಂದು ''''ಧರ್ಮಚೇತನ ಕೃತಿ'''' ಹಾಗೂ ''''ರಂಭಾಪುರಿ ಬೆಳಗು'''' ವಿಶೇಷ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮಠಾಧೀಶರು, ಸಚಿವರು ಪಾಲ್ಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಕರೆ ನೀಡಿದರು.ಹಂಪಸಾಗರ ಹಿರೇಮಠ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೇಣುಕಾಚಾರ್ಯರು ಜಾತಿ ವ್ಯವಸ್ಥೆ ತೊಡೆದುಹಾಕಿ ಸೌಹಾರ್ದ ಬದುಕಿಗೆ ನಾಂದಿ ಹಾಡಿದ್ದರು. ಧಾರ್ಮಿಕ ಪರಂಪರೆಯಲ್ಲಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಅವರು ಶ್ರಮಿಸಿದ್ದರು ಎಂದರು.
ತೆಲಂಗಾಣ ರಾಜ್ಯದಲ್ಲಿ 18 ಸಮುದಾಯಗಳಿಗೆ ಪ್ರತ್ಯೇಕ ಮಠ ಸ್ಥಾಪಿಸಿ, ಸಮುದಾಯದ ಅಭಿವೃದ್ಧಿಗೆ ರಂಭಾಪುರಿ ಮಠ ಶ್ರಮಿಸಿದೆ. ಅಲ್ಲದೆ, ದಿವ್ಯಾಂಗರಿಗೆ ವಸತಿ, ಶಿಕ್ಷಣ ನೀಡಿ ಪೋಷಿಸುತ್ತಿದೆ ಎಂದರು.ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಧರ್ಮ ಮತ್ತು ಮಠಾಧೀಶರಿಂದ ಸಾಧ್ಯ. ಮಹಿಳೆಯರು ಸಂಸ್ಕೃತಿಯನ್ನು ಬಿಡಬಾರದು. ನಮ್ಮ ಸಂಸ್ಕಾರವನ್ನು ಮಕ್ಕಳ ಮೂಲಕ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿದೆ ಎಂದರು.
ಕೊಪ್ಪಳದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ವಾಣಿ ಬಕ್ಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಮುಖಂಡ ಎಂ. ಕಾಶೀನಾಥ, ಜಿ. ರೇವಣಸಿದ್ದಪ್ಪ, ಬಣಕಾರ ರೇವಣ್ಣ, ಬಿಕ್ಕಿಕಟ್ಟಿ ಮಲ್ಲಪ್ಪ, ರವೀಂದ್ರಬಾಬು, ನಾಗರಾಜ್ ಈಡಿಗರ, ಪರಶುರಾಮ್, ಚಂದ್ರಪ್ಪ, ಕಾಶೀನಾಥ, ಜವಳಿ ದುರಗಪ್ಪ, ಚೌಡಪ್ಪ, ನೀಲಪ್ಪ ಉಪಸ್ಥಿತರಿದ್ದರು.