ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರನ್ನು ಆತ್ಮಹತ್ಯೆಗೆ ನೂಕುವಂತಹ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಅಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ ಹೇಳಿದರು.ರಾಜ್ಯ ಸರ್ಕಾರ ಗುಟ್ಕಾ ಹಾಗೂ ಪಾನ್ ಮಸಾಲಾ ಮಾರಾಟ ನಿಷೇಧಿಸಿ ಹೊರಡಿಸಿರುವ ಅಧಿಸೂಚನೆಯನ್ನು ವಿರೋಧಿಸಿ ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಅಡಕೆ ಬೆಳೆಗಾರರ ಹೋರಾಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ಅಡಿಕೆ ಬೆಳೆಗಾರರ ಪೈಕಿ ಶೇ.70 ರಷ್ಟು ಅಡಕೆಯನ್ನು ನಮ್ಮ ರಾಜ್ಯದ ಅಡಿಕೆ ಬೆಳೆಗಾರರು ಬೆಳೆಯುತ್ತಿದ್ದಾರೆ. ರಾಜ್ಯದ 18 ಜಿಲ್ಲೆಗಳಲ್ಲಿ ಸುಮಾರು 12 ರಿಂದ 13 ಲಕ್ಷ ಮೆಟ್ರಿಕ್ ಟನ್ ಅಡಕೆ ಬೆಳೆಯುತ್ತಿದ್ದಾರೆ. ಇದರಿಂದ 375 ಕೋಟಿ ಜಿಎಸ್‌ಟಿ ಸಂಗ್ರಹವಾಗುತ್ತಿದೆ, ರಾಜ್ಯ ಸರ್ಕಾರ ಇವರ ರಕ್ಷಣೆಗೆ ಮುಂದಾಗುವುದನ್ನು ಬಿಟ್ಟು, ಏಕಾಏಕಿ ಗುಟ್ಕಾ, ಪಾನ್ ಮಸಾಲ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದರೆ, ಅಡಕೆ ಬೆಳೆಗಾರರ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಕೂಡಲೇ ಅಡಕೆ ಮಂಡಳಿ ರಚಿಸಬೇಕು, ಅಡಕೆ ಬೆಳೆಗಾರರ ಸಾಧಕ ಬಾಧಕಗಳನ್ನು ಕುರಿತು ಚರ್ಚಿಸಬೇಕು, ಅಡಕೆ ಮಾರುಕಟ್ಟೆ ರಕ್ಷಣೆಗೆ ಮುಂದಾಗಬೇಕು. ಗುಟ್ಕಾ ನಿಷೇಧ ಅದೇಶದಿಂದ ಕೇವಲ ಒಂದು ದಿನದಲ್ಲಿಯೇ ಅಡಕೆ ಬೆಳೆ ಕ್ವಿಂಟಲ್‌ಗೆ 2500ರಷ್ಟು ದರ ಕುಸಿದಿದೆ. ಇದನ್ನು ಕೂಡಲೇ ಅರ್ಥ ಮಾಡಿಕೊಂಡು, ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು, ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಡಕೆ ಬೆಳೆಗಾರರೂ, ಜಿಪಂ ಮಾಜಿ ಸದಸ್ಯರೂ ಆದ ಡಿ.ಜಿ. ವಿಶ್ವನಾಥ್ ಮಾತನಾಡಿ, ಅವಳಿ ತಾಲೂಕಿನಲ್ಲಿ ಅಂದಾಜು24145 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಹೊನ್ನಾಳಿಯಲ್ಲಿ15461 ಹಾಗೂ ನ್ಯಾಮತಿಯಲ್ಲಿ 8684 ಹೆಕ್ಟೇರ್‌ನಲ್ಲಿ ಅಡಕೆ ಬೆಳೆಯಲಾಗುತ್ತಿದೆ ಎಂದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅರಬಗಟ್ಟೆ ರಮೇಶ್, ಮುಖಂಡ ಬಿ.ಸಿದ್ದಪ್ಪ, ಸಾಧುವೀರಶೈವ ಸಮಾಜದ ಅಧ್ಯಕ್ಷ ಗದ್ದಿಗೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎ.ಜಿ.ಪ್ರಕಾಶ್, ರೈತ ಮುಖಂಡ ಕಡದಕಟ್ಟೆಯ ಜಗದೀಶ್, ಅಡಕೆ ಬೆಳೆಗಾರರಾದ ಎಸ್.ಜಿ. ಮಧುಗೌಡ, ಕೋಡಿಕೊಪ್ಪ ಶಿವಪ್ಪ, ಆರ್. ನಾಗಪ್ಪ, ಬಿ.ಜಿ. ಶಿವಮೂರ್ತೆಪ್ಪ, ಕೆ.ಜಿ. ಬಸವಂತಪ್ಪ, ಮುರುಗೇಶ್, ಹಾಲೇಶಪ್ಪ, ಶಿವಶಂಕರ್, ಈಶ್ವರನಾಯ್ಕ, ಸಿದ್ದನಗೌಡ ಸೇರಿ ನೂರಾರು ಜನ ಅಡಕೆ ಬೆಳೆಗಾರರು ಹಾಜರಿದ್ದರು.