ಕನ್ನಡಪ್ರಭ ವಾರ್ತೆ ಸಿಂದಗಿಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಬದಲಾವಣೆ ಹರಿಕಾರ ಬಸವಣ್ಣನವರ ಬಗ್ಗೆ ನಡೆಯುತ್ತಿರುವ ವಿದ್ಯಮಾನ ಸಮಾಜಕ್ಕೆ ಶೋಭೆ ತರುವಂತಹದ್ದಲ್ಲ. ಬಸವಣ್ಣನವರ ಬಗ್ಗೆ ಲೇಖಕ ರವಿ ಹಂಜ್ ಅವರ ಹೇಳಿಕೆಯನ್ನು ಯಾರೂ ಒಪ್ಪುವಂತಹದ್ದಲ್ಲ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಪುರ ಜಿಲ್ಲೆಯ ಸಿಂದಗಿಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ತೀವ್ರವಾಗಿ ಖಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಿಂದಗಿ

ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಬದಲಾವಣೆ ಹರಿಕಾರ ಬಸವಣ್ಣನವರ ಬಗ್ಗೆ ನಡೆಯುತ್ತಿರುವ ವಿದ್ಯಮಾನ ಸಮಾಜಕ್ಕೆ ಶೋಭೆ ತರುವಂತಹದ್ದಲ್ಲ. ಬಸವಣ್ಣನವರ ಬಗ್ಗೆ ಲೇಖಕ ರವಿ ಹಂಜ್ ಅವರ ಹೇಳಿಕೆಯನ್ನು ಯಾರೂ ಒಪ್ಪುವಂತಹದ್ದಲ್ಲ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಪುರ ಜಿಲ್ಲೆಯ ಸಿಂದಗಿಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಸವಣ್ಣನವರು ಒಬ್ಬ ಪ್ರಶ್ನಾತೀತ ದಾರ್ಶನಿಕರು. ವೀರಶೈವ ಲಿಂಗಾಯತ ಧರ್ಮಕ್ಕೆ ಬಸವಣ್ಣನವರ ಕೊಡುಗೆ ಅವಿಸ್ಮರಣೀಯ ಹಾಗೂ ಅದ್ವಿತೀಯ. ಯಾವುದೇ ವಿಚಾರಗಳು ಧರ್ಮಾಭಿಮಾನಿಗಳ ಭಾವನೆಗೆ ಧಕ್ಕೆ ತರುವಂತೆ ಇರಬಾರದು. ನಮ್ಮ ಅಭಿಪ್ರಾಯಗಳು ಬೋಧ ಪ್ರಧಾನವಾಗಿರಬೇಕೆ ವಿನಃ ವಿವಾದ ಪ್ರಧಾನವಾಗಿರಬಾರದು. ಯಾರು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು. ಧರ್ಮ ಮತ್ತು ಪರಂಪರೆ ಉಳಿಸಿ ಬೆಳೆಸಿಕೊಂಡು ಮುನ್ನಡೆಸುವ ಹೊಣೆಗಾರಿಕೆ ಪ್ರತಿಯೊಬ್ಬ ಧರ್ಮ ಬಾಂಧವರದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿಗೆ ರವಿ ಹಂಜ್ ಅವರು ಸಂದರ್ಶನವೊಂದರಲ್ಲಿ ಬಸವಣ್ಣನವರ ವ್ಯಕ್ತಿತ್ವದ ಕುರಿತು ಅವಹೇಳನಕಾರಿ ಹೇಳಿಕೆ ನಮ್ಮ ಎಲ್ಲಾ ಶಿವಾಚಾರ್ಯ ಬಳಗಕ್ಕೆ ತೀವ್ರ ಆಘಾತ ಉಂಟು ಮಾಡಿದೆ. ನಮ್ಮ ಶಿವಾಚಾರ್ಯ ಬಳಗ ಮಹಾ ಮಾನವತಾವಾದಿ ಜಗಜ್ಯೋತಿ ಬಸವಣ್ಣನವರ ಬಗ್ಗೆ ಅಪಾರ ಗೌರವ ಮತ್ತು ಪೂಜ್ಯತೆ ಹೊಂದಿದೆ. ಅಭಿಪ್ರಾಯ ಭೇದಗಳನ್ನು ಆರೋಗ್ಯಪೂರ್ಣ ಚರ್ಚೆಯ ಮೂಲಕ ಪರಿಹರಿಸಿಕೊಳ್ಳಬೇಕೆ ವಿನಃ ಈ ರೀತಿ ಚಾರಿತ್ರ್ಯ ಹರಣ ಕಾರ್ಯವನ್ನು ಯಾರೂ ಮಾಡಬಾರದು. ಇದರಿಂದಾಗಿ ಧರ್ಮ ಮತ್ತು ಪರಂಪರೆ ಬಗ್ಗೆ ಜನತೆ ಭ್ರಮನಿರಸನಗೊಳ್ಳುವಂತಾಗುತ್ತದೆ. ಇನ್ನು ಮುಂದಾದರೂ ಯಾವುದೇ ಬರಹಗಾರರು ಶಾಂತಿ ಕದಡುವಂತಹ ಕಾರ್ಯಕ್ಕೆ ಕೈ ಹಾಕದಿರಲೆಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಆಶಿಸುತ್ತದೆ ಎಂದು ಹೇಳಿದ್ದಾರೆ.