ಜನರು ಕ್ಯಾನ್ಸರ್ ಎಂದರೆ ಭಯಪಡದೆ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರೋಗ ಮುಕ್ತ ಹಾಗೂ ಆರೋಗ್ಯಕರ ಜೀವನ ರೂಪಿಸಿಕೊಳ್ಳಬೇಕೆಂದು ಡಾ. ಅನುಷಾ ಕರೆ ನೀಡಿದರು.

ಸುಂಟಿಕೊಪ್ಪ : ಜನರು ಕ್ಯಾನ್ಸರ್ ಎಂದರೆ ಭಯಪಡದೆ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರೋಗ ಮುಕ್ತ ಹಾಗೂ ಆರೋಗ್ಯಕರ ಜೀವನ ರೂಪಿಸಿಕೊಳ್ಳಬೇಕೆಂದು ಡಾ. ಅನುಷಾ ಕರೆ ನೀಡಿದರು.ಅವರು ಕೊಡಗು ಮೆಡ್ ಸಿಟಿ (ಕೆಎಂಸಿ) ಆಸ್ಪತ್ರೆಯ ೨ನೇ ವಾರ್ಷಿಕೋತ್ಸವದ ಅಂಗವಾಗಿ, ನಮ್ಮ ಸುಂಟಿಕೊಪ್ಪ ಬಳಗ ಕೆಎಂಸಿ ಆಸ್ಪತ್ರೆ ಹಾಗೂ ಮೈಸೂರಿನ ಭಾರತ್ ಹಾಸ್ಪಿಟಲ್ ಅಂಡ್ ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿ ಜಂಟಿ ಆಶ್ರಯದಲ್ಲಿ ನಡೆದ "ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ "ದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಿಬಿರದಲ್ಲಿ ಮೈಸೂರು ಭಾರತ್ ಹಾಸ್ಪಿಟಲ್ ಐ.ಪಿ.ಡಿ ವಿಭಾಗದ ತಜ್ಞೆ ಡಾ. ಅನುಷಾ ಅವರು ಮಾತನಾಡಿ ಸಾರ್ವಜನಿಕರಿಗೆ ಬಾಯಿ ಕ್ಯಾನ್ಸರ್, ಶ್ವಾಸಕೋಶ, ಗರ್ಭಕಂಠ, ಸ್ತನ, ಹೊಟ್ಟೆ ಹಾಗೂ ರಕ್ತ ಸಂಬಂಧಿತ ಕ್ಯಾನ್ಸರ್ ರೋಗಗಳ ಬಗ್ಗೆ ಮಾಹಿತಿ ನೀಡಿ ಆರಂಭಿಕ ಪತ್ತೆಯಿಂದ ಕ್ಯಾನ್ಸರ್ ತಡೆ ಸಾಧ್ಯಎಂದು ಜಾಗೃತಿ ಮೂಡಿಸಿದರು.ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ (ಸ್ಟೇಜ್ ೧ ಮತ್ತು ೨) ಪತ್ತೆ ಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ರೋಗವು ಇತರ ಭಾಗಗಳಿಗೆ ಹರಡುವ ಮುನ್ನವೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಧೂಮಪಾನ, ತಂಬಾಕು, ಅಡಿಕೆ ಅಗಿಯುವುದು ಹಾಗೂ ಮದ್ಯಪಾನ ಮಾಡುವ ಅಭ್ಯಾಸಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕೆಟ್ಟ ಅಭ್ಯಾಸಗಳನ್ನು ತಕ್ಷಣವೇ ಬಿಡುವುದು ಉತ್ತಮ.

ಜೀವನಶೈಲಿ ಮತ್ತು ಆಹಾರ ಕ್ರಮ: ಹೊರಗಿನ ರಸ್ತೆಬದಿಯ ಆಹಾರಗಳು, ಕೆಮಿಕಲ್ ಹಾಗೂ ಬಣ್ಣ ಬೆರೆಸಿದ ಕೃತಕ ಆಹಾರಗಳು ಮತ್ತು ಕೂಲ್ ಡ್ರಿಂಕ್ಸ್ಗಳನ್ನು ಸೇವಿಸುವುದನ್ನು ತಡೆದು, ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರ, ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ಸೇವಿಸಬೇಕು. ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹದ ಆರೋಗ್ಯ ಕಾಯ್ದುಕೊಳ್ಳಬಹುದು.

ಪ್ರಮುಖವಾಗಿ ಕಂಡು ಬರುವ ಲಕ್ಷಣಗಳು ದೀರ್ಘಕಾಲದ ಕೆಮ್ಮು ಅಥವಾ ಧ್ವನಿಯಲ್ಲಿ ಬದಲಾವಣೆ, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ದೇಹದಲ್ಲಿ ಗುಣವಾಗದ ಗಾಯಗಳು, ಸ್ತನ ಅಥವಾ ದೇಹದ ಯಾವುದೇ ಭಾಗದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುವುದು, ನುಂಗಲು ತೊಂದರೆ, ಅಜೀರ್ಣತೆ ಮತ್ತು ದೀರ್ಘಕಾಲದ ಆಯಾಸ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು.

ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸವಿದ್ದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಹೆಚ್‌ಪಿವಿ ಲಸಿಕೆ ಲಭ್ಯವಿದ್ದು, ಮುನ್ನೆಚ್ಚರಿಕೆಯಾಗಿ ಲಸಿಕೆ ಪಡೆದುಕೊಳ್ಳಬಹುದು ಎಂದು ಡಾ. ಅನುಷಾ ಸಲಹೆ ನೀಡಿದರು.

ಸುಮಾರು ೫೦ ಕ್ಕೂ ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಂಡರು.ಈ ಸಂದರ್ಭದಲ್ಲಿ ಡಾ. ನದೀಮ್,ಕೆ.ಎಂ.ಸಿ ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ನಿಯಾಜ್, ನಮ್ಮ ಸುಂಟಿಕೊಪ್ಪ ಬಳಗದ ಅನಿಲ್ ಕುಮಾರ್, ಸುಹೈಲ್ ಹಾಗೂ ಕೆ.ಎಸ್.ಹನೀಫ್ ಉಪಸ್ಥಿತರಿದ್ದರು.