ರೇಬೀಸ್ ಕಾಯಿಲೆಯು ಮಾರಣಾಂತಿಕ ವೈರಲ್ ಸೊಂಕಾಗಿದ್ದು, ಸೋಂಕಿತ ಪ್ರಾಣಿಗಳ ಕಡಿತ, ಪರಚುವಿಕೆ ಮತ್ತು ಜೊಲ್ಲಿನಿಂದ ಹರಡುತ್ತದೆ. ರೇಬೀಸ್ ರೋಗಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದೇ ಉತ್ತಮ ಮದ್ದು, ರೇಬೀಸ್ ಬಗ್ಗೆ ಭಯಪಡುವ ಬದಲು ಜಾಗೃತಿ ವಹಿಸಬೇಕು ಎಂದು ಮಲ್ಲಿಗೇನಹಳ್ಳಿ ಸರ್ಕಾರಿ ಪಶು ವೈದ್ಯಾಧಿಕಾರಿ ಡಾ.ರವೀಂದ್ರ ತಿಳಿಸಿದರು.
ಕನ್ನಡಪ್ರಭ ವಾರ್ತೆ ನ್ಯಾಮತಿ
ರೇಬೀಸ್ ಕಾಯಿಲೆಯು ಮಾರಣಾಂತಿಕ ವೈರಲ್ ಸೊಂಕಾಗಿದ್ದು, ಸೋಂಕಿತ ಪ್ರಾಣಿಗಳ ಕಡಿತ, ಪರಚುವಿಕೆ ಮತ್ತು ಜೊಲ್ಲಿನಿಂದ ಹರಡುತ್ತದೆ. ರೇಬೀಸ್ ರೋಗಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದೇ ಉತ್ತಮ ಮದ್ದು, ರೇಬೀಸ್ ಬಗ್ಗೆ ಭಯಪಡುವ ಬದಲು ಜಾಗೃತಿ ವಹಿಸಬೇಕು ಎಂದು ಮಲ್ಲಿಗೇನಹಳ್ಳಿ ಸರ್ಕಾರಿ ಪಶು ವೈದ್ಯಾಧಿಕಾರಿ ಡಾ.ರವೀಂದ್ರ ತಿಳಿಸಿದರು.ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳ ಪೋಷಕರಿಗೆ ರೇಬೀಸ್ ಕಾಯಿಲೆಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೇಬೀಸ್ ಕಾಯಿಲೆ ಅತ್ಯಂತ ಗಂಬೀರವಾದ ವೈರಲ್ ಕಾಯಿಲೆಯಾಗಿದ್ದು, ಹುಚ್ಚು ನಾಯಿಗಳ ಕಡಿತದಿಂದ ಸಂಭವಿಸುತ್ತದೆ. ನಾಯಿಗಳಲ್ಲದೇ ಬೆಕ್ಕು ಮತ್ತು ನರಿ, ಬಾವಲಿಗಳಂತಹ ಪ್ರಾಣಿಗಳಿಂದಲೂ ಹರಡಬಹುದು. ರೇಬೀಸ್ ವೈರಸ್ ದೇಹವನ್ನು ಪ್ರವೇಶಿಸಿದರೆ ಅದರ ಲಕ್ಷಣಗಳು ಕಾಣಿಸದೇ ಇರಬಹುದು. ತೀವ್ರವಾದ ಜ್ವರ, ತಲೆನೋವು, ಪ್ರಾಣಿಗಳು ಕಚ್ಚಿದ ಜಾಗದಲ್ಲಿ ವಿಪರೀತ ತುರಿಕೆ ಮತ್ತು ಉರಿ ಕಾಣಿಸಿಕೊಂಡರೆ ಬದುಕುವುದು ತೀರ ಅಸಾಧ್ಯ, ಆದ್ದರಿಂದ ಯಾವುದೇ ಪ್ರಾಣಿಗಳು ಕಚ್ಚಿದ ತಕ್ಷಣ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಈ ರೋಗವನ್ನು ತಡೆಗಟ್ಟಬಹುದು ಎಂದರು.ಪ್ರಾಣಿಗಳು ಕಚ್ಚಿದ ತಕ್ಷಣ ಗಾಯದ ಜಾಗವನ್ನು ಹರಿಯುವ ನಲ್ಲಿ ನೀರಿನಲ್ಲಿ 15ನಿಮಿಷಗಳ ಕಾಲ ಸೋಪು ಬಳಸಿ ಚೆನ್ನಾಗಿ ತೊಳೆಯಬೇಕು ಇದರಿಂದ ವೈರಸ್ ತೀವ್ರತೆ ಕಡಿಮೆಯಾಗುತ್ತದೆ. ಗಾಯ ತೊಳೆದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದು ರೇಬೀಸ್ ನಿರೋಧಕ ಲಸಿಕೆಯನ್ನು ಸರಿಯಾದ ವೇಳಾಪಟ್ಟಿಯಂತೆ ಪಡೆದುಕೊಳ್ಳಬೇಕು. ಚಿಕ್ಕ ಮಕ್ಕಳು ಹಾಗೂ ವಿದ್ಯಾರ್ಥಿಗಳನ್ನು ಪೋಷಕರು ಸಾಕು ನಾಯಿ, ಬೀದಿ ನಾಯಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಪ್ರಾಣಿಗಳು ಕಚ್ಚಿದ ಗಾಯಕ್ಕೆ ಸುಣ್ಣ, ಅರಿಶಿನ ಸೇರಿದಂತೆ ಯಾವುದೇ ಸ್ವಂತ ನಾಟಿ ಔಷಧಿಯಂತಹ ಚಿಕಿತ್ಸೆ ಮಾಡದೇ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ನಾವು ಮನೆಯಲ್ಲಿ ಸಾಕುವ ನಾಯಿ ಬೆಕ್ಕುಗಳಿಗೆ ಸಮೀಪದ ಪಶು ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುವ ರೇಬೀಸ್ ಲಸಿಕೆಯನ್ನು ಹಾಕಿಸುವ ಮೂಲಕ ಸುರಕ್ಷಿತವಾಗಿರಬೇಕು ಎಂದು ಸಲಹೆ ನೀಡಿದರು.
ರೇಬೀಸ್ ಕಾಯಿಲೆಯ ಜಾಗೃತಿ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಎಂ.ಸುಧಾ, ಎಸ್. ಸರ್ವಮಂಗಳ, ವೀಣಾ, ಅಮಿತ್, ಪಶು ಆಸ್ಪತ್ರೆಯ ಸಹಾಯಕ ಬಸವರಾಜ್, ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಇದ್ದರು.