ಪೊಲೀಸ್ ಠಾಣೆ ಬಗ್ಗೆ ಭಯ ಬೇಡ: ಪಿಎಸ್‌ಐ ಗುರುರಾಜ್

| Published : Jul 29 2024, 12:48 AM IST

ಸಾರಾಂಶ

ಮಕ್ಕಳಲ್ಲಿ ಪೊಲೀಸ್ ಠಾಣೆ ಬಗ್ಗೆ ಭಯ ಇರಬಾರದು. ಆದರೆ ನಾನು ಚನ್ನಾಗಿ ಓದಿ ಮುಂದಿನ ದಿನ ಇಂತಹ ಠಾಣೆಯ ಉನ್ನತ ಅಧಿಕಾರಿ ಆಗುತ್ತೇನೆ ಎಂಬ ಗುರಿ ಇರಬೇಕು.

ಪೊಲೀಸ್ ಠಾಣೆಯಲ್ಲಿ ಶಾಲಾ ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಕನೂರು

ಮಕ್ಕಳಲ್ಲಿ ಪೊಲೀಸ್ ಠಾಣೆ ಬಗ್ಗೆ ಭಯ ಇರಬಾರದು. ಆದರೆ ನಾನು ಚನ್ನಾಗಿ ಓದಿ ಮುಂದಿನ ದಿನ ಇಂತಹ ಠಾಣೆಯ ಉನ್ನತ ಅಧಿಕಾರಿ ಆಗುತ್ತೇನೆ ಎಂಬ ಗುರಿ ಇರಬೇಕು ಎಂದು ಪಿಎಸ್‌ಐ ಟಿ. ಗುರುರಾಜ್ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ತೆರೆದ ಮನೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳು ಬಾಲ್ಯದಲ್ಲಿ ಕನಸು ಕಾಣಬೇಕು. ಬದುಕು ಎಂಬುದು ಸುಂದರವಾದದ್ದು. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ಮಕ್ಕಳು ಈ ದಿನಗಳಲ್ಲಿ ತಾವು ಸಹ ಉತ್ತಮ ಪ್ರಜೆಯಾಗಿ ಉನ್ನತ ಸ್ಥಾನ ಪಡೆಯುತ್ತೇವೆ ಎಂಬ ಗುರಿ ತಾಳಬೇಕು. ರಾಷ್ಟ್ರದಲ್ಲಿ ಸಂವಿಧಾನ, ಕಾನೂನು ಎಲ್ಲರಿಗೂ ನ್ಯಾಯ ಒದಗಿಸಿಕೊಡುತ್ತದೆ. ಕಾನೂನು ಹಾಗೂ ಸಂವಿಧಾನವನ್ನು ಅಭ್ಯಾಸ ಮಾಡಬೇಕು. ತಮ್ಮ ಕಣ್ಣ ಮುಂದೆ ಯಾವುದೇ ಅಹಿತಕರ ಘಟನೆ ಜರುಗಿದರೆ ಅದನ್ನು ಖಂಡಿಸುವ ಹಾಗೂ ಅಲ್ಲಿ ನಡೆದಿರುವ ಸತ್ಯಾಂಶ ಹೇಳುವ ಧೈರ್ಯವನ್ನು ಮಕ್ಕಳು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ದೇಶದ ಕಾನೂನನ್ನು ತಿಳಿದುಕೊಳ್ಳಬೇಕು ಅಂದಾಗ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಬಹುದಾಗಿದೆ. ಕೆಲವರಿಗೆ ಪೊಲೀಸ್ ಠಾಣೆ ಎಂದರೆ ಭಯವಾಗುತ್ತದೆ, ನೀವು ವಿದ್ಯಾರ್ಥಿಗಳಿರುವಾಗ ದೇಶದ ಕಾನೂನು ತಿಳಿದುಕೊಳ್ಳಬೇಕು. ನಿಮಗೆ ಶಾಲೆಯಲ್ಲಿ ಸಮಸ್ಯೆಗಳು ಇದ್ದರೆ, ಯಾರಾದರೂ ತೊಂದರೆ ನೀಡುತ್ತಿದ್ದರೆ ಅಂತವರ ಬಗ್ಗೆ ನಮಗೆ ತಿಳಿಸಬೇಕು. ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲ ವಿದ್ಯಾರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬರಬೇಕೆಂದು ಹೇಳಿದರು.

ಮಕ್ಕಳಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಗುಣ ಬರಬೇಕು. ನ್ಯಾಯ, ಸತ್ಯ, ಪ್ರಾಮಾಣಿಕತೆಗಳು ಮೈಗೂಡಬೇಕು. ಸಮಾಜದ ಸುಧಾರಣೆ ಆಗಬೇಕಾದರೆ ಸತ್ಯ, ನ್ಯಾಯಗಳು ಸದೃಢವಾಗಿ ಪ್ರಸ್ತುತವಾದಾಗ ಸಮಾಜದ ದುಷ್ಟ ಶಕ್ತಿಗಳು ಹಿಮ್ಮೆಟ್ಟುತ್ತವೆ. ಇವುಗಳನ್ನು ಮಕ್ಕಳು ತಮ್ಮ ಕಲಿಕಾ ಅವಧಿಯಲ್ಲಿ ಪಾಲಿಸಬೇಕು. ಅಲ್ಲದೆ ಸುಳ್ಳು ಹೇಳಬಾರದು, ಕಳ್ಳತನ ಮಾಡಬಾರದು. ಶಿಕ್ಷಕರು, ಪಾಲಕರು ಹಾಗೂ ಹಿರಿಯರಿಗೆ ಗೌರವ ನೀಡಬೇಕು ಎಂದು ಗುರುರಾಜ ಮಕ್ಕಳಿಗೆ ಕಿವಿಮಾತು ಹೇಳಿದರು.

ಎಎಸ್‌ಐ ನಿರಂಜನ್, ಪೊಲೀಸ್ ಸಿಬ್ಬಂದಿ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.