ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಕ್ರೋ ಫೈನಾನ್ಸ್ ಕಂಪನಿಯವರು ರೈತರಿಗೆ ಮತ್ತು ಸಾರ್ವಜನಿಕರಿಗೆ ನೀಡಿರುವ ಸಾಲ ವಸೂಲಾತಿ ವೇಳೆ ಕಿರುಕುಳ, ಒತ್ತಡ ಹೇರಬಾರದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಹೇಳಿದರು.ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ರೈತರು, ಸಾರ್ವಜನಿಕರಿಗೆ ನೀಡಿರುವ ಸಾಲ ವಸೂಲು ಮಾಡುವಾಗ ಮೈಕ್ರೋ ಫೈನಾನ್ಸ್ ಕಂಪನಿಗಳು ಮೇಲೆ ಕಿರುಕುಳ ಹಾಗೂ ಒತ್ತಡ ಹೇರುತ್ತಿರುವುದು ಕಂಡುಬಂದಿದೆ. ಇದು ಅತಿರೇಕವಾದಲ್ಲಿ ಅಥವಾ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಹಾಗೂ ಕಿರುಕುಳ ನೀಡಿದ ಮೈಕ್ರೋಪೈನಾನ್ಸ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
೨ ರಿಂದ ೩ ತಿಂಗಳು ಸಾಲ ವಸೂಲಾತಿ ಮಾಡುವಂತಿಲ್ಲ:ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ ೭೭ ಸಾವಿರ ರೈತರಿಗೆ ೩೪ ಕೋಟಿ ರು. ಹಣವನ್ನು ಬರ ಪರಿಹಾರವಾಗಿ ನೀಡಿದೆ. ಬರಗಾಲ ಇರುವ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಎರಡು ಮೂರು ತಿಂಗಳುಗಳ ಕಾಲ ಸಾಲ ಮರುಪಾವತಿಗೆ ಅವಕಾಶ ನೀಡಿ ಒತ್ತಡ ಹೇರದಂತೆ ನೋಡಿಕೊಳ್ಳಿ ಎಂದರು.
ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ಸಾಲ ವಸೂಲಾತಿ ಮಾಡುವವರು ಪ್ರತಿದಿನ ಮನೆಗೆ ಭೇಟಿ ನೀಡುತ್ತಿದ್ದು, ಇದರಿಂದ ಸಾರ್ವಜನಿಕರು ತಮಗೆ ಪ್ರತಿ ದಿನದ ಕೆಲಸ ಮಾಡಲು ತೊಂದರೆ ಹಾಗೂ ಕಿರಿಕಿರಿ ಉಂಟಾಗುತ್ತಿದೆ ಎಂದು ದೂರುಗಳು ಬರುತ್ತಿದ್ದು, ಸಾಲ ವಸೂಲಾತಿಗೆ ಸರಿಯಾದ ಸಮಯ ನಿಗದಿಮಾಡಿಕೊಳ್ಳುವಂತೆ ತಿಳಿಸಿದರು.ಸಾಲ ಮರು ಪಾವತಿಗೆ ಸಂಬಂಧಿಸಿದಂತೆ ಮೈಕ್ರೋಪೈನಾನ್ಸ್‌ಗಳು ತೊಂದರೆ ನೀಡುತ್ತಿದ್ದಲ್ಲಿ ಸಹಾಯವಾಣಿ ಸಂಖ್ಯೆ: ೧೮೦೦೪೨೫೫೬೫೪, ೧೮೦೦೧೦೨೧೦೮೦, ೦೧೧ ೪೭೧೭೪೪೧೦ ಅನ್ನು ಸಂಪರ್ಕಿಸಬಹುದು ಎಂದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್‌ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲ, ವಿವಿಧ ಮೈಕ್ರೋ ಫೈನಾನ್ಸ್‌ನ ವ್ಯವಸ್ಥಾಪಕರು ಉಪಸ್ಥಿತರಿದ್ದರು.