ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುವಿದ್ಯಾರ್ಥಿ, ಯುವ ಜನರಲ್ಲಿರುವ ಅಭಿಪ್ರಾಯ ವ್ಯಕ್ತಪಡಿಸಲು ಕಾಲೇಜು ಮ್ಯಾಗಜೀನ್ ಒಂದು ಸೃಜನಶೀಲ ವೇದಿಕೆಯಾಗಿದೆ ಎಂದು ಹಂಪಿ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.ನಗರದ ಸರ್ಕಾರಿ ಪದವಿ ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ಸ್ಮರಣ ಸಂಚಿಕೆ ತುಂಬೆ ಬಿಡುಗಡೆಗೊಳಿಸಿ ಮಾತನಾಡಿದರು.ಸ್ಮರಣ ಸಂಚಿಕೆಗಳಿಗೆ ಏನಾದರೊಂದು ಬರೆಯುವ ಮೂಲಕ ನಿಮ್ಮ ಇರುವಿಕೆಯನ್ನು ವ್ಯಕ್ತಪಡಿಸಬೇಕು. ಗ್ರಾಮೀಣ ಮಕ್ಕಳಲ್ಲಿ ಹಿಂಜರಿಕೆ ಎಂಬುದು ಬಹಳಷ್ಟು ಕೆಲಸ ಮಾಡುತ್ತದೆ. ಆದರೆ ದೇಶದಲ್ಲಿ ಹೆಸರು ಮಾಡಿರುವ ಸಾಹಿತಿ, ವಿಜ್ಞಾನಿ, ಬರಹಗಾರರು ಎಲ್ಲರೂ ಗ್ರಾಮೀಣ ಪರಿಸರದಿಂದ ಬಂದವರೇ ಆಗಿದ್ದಾರೆ. ಹಾಗಾಗಿ ಗ್ರಾಮೀಣ ಮಕ್ಕಳು ಕೀಳಿರಿಮೆಯನ್ನು ಬಿಟ್ಟು, ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಇಂತಹ ವೇದಿಕೆ ಬಳಸಿಕೊಳ್ಳಬೇಕಾಗಿದೆ ಎಂದರು.
ಸುತ್ತಮುತ್ತ ಕಂಡುಬರುವ ಘಟನೆಗಳು, ತಮ್ಮ ಬದುಕಿನ ವೃತ್ತಾಂತಗಳನ್ನೇ ಕವನ, ಕಥೆ, ಲೇಖನ, ಹಾಸ್ಯ, ವಿಡಂಬನೆಯ ಮೂಲಕ ಅಭಿವ್ಯಕ್ತಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಇದರಿಂದ ನಿಮಗೆ ಭಾಷೆಯ ಮೇಲೆ ಹಿಡಿತ ಸಿಗುವುದಲ್ಲದೆ,ಎಲ್ಲವನ್ನು ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ.ಅಲ್ಲದೆ ಸಂವಹನ ಜ್ಞಾನ ವಿಸ್ತಾರಗೊಳ್ಳುತ್ತದೆ ಎಂದು ಕಿವಿ ಮಾತು ಹೇಳಿದರು.ತುಂಬೆ ಅತ್ಯಂತ ನಿಕೃಷ್ಟವಾಗಿರುವ ಗಿಡ ಆದರೆ ಅದರ ಹೂವು ಶಿವನಿಗೆ ಶ್ರೇಷ್ಠ. ತುಮಕೂರು ಜಿಲ್ಲೆ ಸಹ ಬಡತನ, ಸಿರಿತನ ಎರಡನ್ನು ಹೊಂದಿದೆ. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ,ಐತಿಹಾಸಿಕವಾಗಿ ಬಹಳ ಪ್ರಸಿದ್ದಿ ಪಡೆದಿದೆ.ನಿಧಾನವಾಗಿ ವಿದ್ಯಾಕಾಶಿಯಾಗಿ ಪರಿವರ್ತನೆಯಾಗುತ್ತಿದೆ ಎಂದರು.
ಉರ್ದು ವಿಭಾಗದ ಮುಖ್ಯಸ್ಥೆ ತರನ್ನುಂ ನಿಖತ್ ಎಸ್. ಮಾತನಾಡಿ, ಆನ್‌ಲೈನ್‌ನಲ್ಲಿ ಇದ್ದ ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ಆಫ್‌ಲೈನ್‌ಗೆ ತರಬೇಕೆಂದು ಪ್ರಯತ್ನಿಸಿದ ಫಲವಾಗಿ ತುಂಬೆ ಸಂಚಿಕೆ ನಿಮಗಳ ಕೈ ಸೇರಿದೆ. ಇದು ವಿದ್ಯಾರ್ಥಿಗಳಿಗೊಸ್ಕರವೇ ಇರುವ ವೇದಿಕೆಯಾಗಿದೆ. ಮೊಬೈಲ್ ನಿಮ್ಮಲ್ಲಿರುವ ಪ್ರತಿಭೆಯನ್ನು ಕುಗ್ಗಿಸುತ್ತಿದ್ದು, ಅದನ್ನು ಬದಿಗಿಟ್ಟು, ನಿಮ್ಮಲ್ಲಿರುವ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುವಂತೆ ಸಲಹೆ ನೀಡಿದರು. ತುಂಬೆ ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ಡಾ.ತಿಪ್ಪೇಸ್ವಾಮಿ ಜಿ. ಮಾತನಾಡಿ, 2016 ರಿಂದ ತುಂಬೆ ಸ್ಮರಣ ಸಂಚಿಕೆ ಆರಂಭಗೊಂಡಿದ್ದು, ಕೋವಿಡ್‌ನಿಂದಾಗಿ ಅನ್‌ಲೈನ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಆದರೆ ಕಾಲೇಜಿನ ಪ್ರಾಂಶುಪಾಲ ತರನ್ನುಂ ನಿಖತ್ ಎಸ್ ಅವರ ಒತ್ತಾಯ ಮತ್ತು ಬೆಂಬಲದ ಫಲವಾಗಿ ಮುದ್ರಣಗೊಂಡು ಬಿಡುಗಡೆಯಾಗಿದೆ. ತುಂಬೆ ಸ್ಮರಣ ಸಂಚಿಕೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರುಗಳ ಸುಮಾರು 125ಕ್ಕೂ ಹೆಚ್ಚು ಲೇಖನಗಳು, ಕವಿತೆಗಳು ಮುದ್ರಣಗೊಂಡಿವೆ ಎಂದರು.ಪ್ರಾಂಶುಪಾಲ ಟಿ.ಡಿ.ವಸಂತ ಮಾತನಾಡಿ, ವಿದ್ಯಾರ್ಥಿಗಳ ಅಭಿವ್ಯಕ್ತಿಗೆ ತುಂಬೆ ಸ್ಮರಣ ಸಂಚಿಕೆ ಒಂದು ಉತ್ತಮ ವೇದಿಕೆಯಾಗಿದೆ. ಪಠ್ಯದ ಜೊತೆಗೆ, ಪಠ್ಯೇತರ ವಿಷಯಗಳಲ್ಲಿ ತಮ್ಮಲ್ಲಿರುವ ಪ್ರತಿಭೆ ಆನಾವರಣಕ್ಕೆ ಸಿಗುವ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಂಡಾಗ, ಸ್ಮರಣ ಸಂಚಿಕೆ ಮತ್ತಷ್ಟು ಸುಂದರವಾಗಿ ಮೂಡಿ ಬರಲು ಸಹಕಾರಿಯಾಗುತ್ತದೆ ಎಂದರು. ಕಾಲೇಜಿ ಪತ್ರಾಂಕಿತ ವ್ಯವಸ್ಥಾಪಕ ಪದ್ಮನಾಭ.ಜಿ.ಉಪನ್ಯಾಸಕರಾದ ರೇಣುಕಾ ಪ್ರಸನ್ನ,ಯೋಗೀಶ್,ಅನುಸೂಯ.ಕೆ.ವಿ. ಸೇರಿದಂತೆ ಸ್ಮರಣ ಸಂಚಿಕೆ ಸಂಪಾದಕ ಮಂಡಳಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.