ರೇಬಿಸ್ ಕಾಯಿಲೆಗೆ ಒಮ್ಮೆ ತುತ್ತಾದರೆ ಯಾವುದೇ ಚಿಕಿತ್ಸೆ ಇರುವುದಿಲ್ಲ. ಆದರೆ, ಪ್ರಾಣಿ ಕಚ್ಚಿದ ತಕ್ಷಣ ಸೂಕ್ತ ಲಸಿಕೆ ಪಡೆಯುವುದರಿಂದ ಇದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.
ಬಳ್ಳಾರಿ: ಸಾಕು ಅಥವಾ ಬೀದಿ ನಾಯಿಗಳು ಕಚ್ಚಿದಾಗ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬಂಡಿಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ರೇಬಿಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಲಕಾನಂದ ಡಿ. ಮಳಿಗಿ ಮಾತನಾಡಿ, ರೇಬಿಸ್ ಕಾಯಿಲೆಗೆ ಒಮ್ಮೆ ತುತ್ತಾದರೆ ಯಾವುದೇ ಚಿಕಿತ್ಸೆ ಇರುವುದಿಲ್ಲ. ಆದರೆ, ಪ್ರಾಣಿ ಕಚ್ಚಿದ ತಕ್ಷಣ ಸೂಕ್ತ ಲಸಿಕೆ ಪಡೆಯುವುದರಿಂದ ಇದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.ಹಾಗಾಗಿ ಯಾವುದೇ ಪ್ರಾಣಿ ಕಚ್ಚಿದಾಗ ಗಾಬರಿ ಪಡದೆ 24 ಗಂಟೆಯೊಳಗೆ ಆಂಟಿ-ರೇಬಿಸ್ ಲಸಿಕೆ ತಪ್ಪದೇ ಪಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ. ಮಾತನಾಡಿ, ನಾಯಿ, ಬೆಕ್ಕು ಸೇರಿದಂತೆ ಇತರ ಪ್ರಾಣಿಗಳು ಕಚ್ಚಿದಾಗ ಗಾಯ ಹರಿಯುವ ಶುದ್ಧ ನೀರಿನಲ್ಲಿ 15 ನಿಮಿಷಗಳ ಕಾಲ ಸೋಪು ಬಳಸಿ ತೊಳೆಯುವುದರಿಂದ ಶೇ.50 ರಿಂದ 70 ರಷ್ಟು ರೇಬಿಸ್ ಅಪಾಯ ತಡೆಯಬಹುದು ಎಂದರು.ವೈದ್ಯಾಧಿಕಾರಿ ಡಾ. ಸೈಯದ್ ಯಾಸ್ಮಿನ್, ಡಾ. ಫಾಮೀದಾ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಜೆ., ಎಪಿಡೆಮಿಯಾಲಜಿಸ್ಟ್ ಡಾ. ವಿಶಾಲಾಕ್ಷಿ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ ಕಾರ್ಯಕ್ರಮ ನಿರೂಪಿಸಿದರು.