ಅಭಿವೃದ್ಧಿ ಕೆಲಸಕ್ಕೆ ಅಡ್ಡಿಪಡಿಸಬೇಡಿ

| Published : Jul 12 2024, 01:36 AM IST

ಅಭಿವೃದ್ಧಿ ಕೆಲಸಕ್ಕೆ ಅಡ್ಡಿಪಡಿಸಬೇಡಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಕಾರಣಕ್ಕೂ ರಸ್ತೆ ಕಾಮಗಾರಿ ನಿಲ್ಲಿಸುವುದಿಲ್ಲ. ಶಾಸಕರು ಹೇಳಿದಂತೆ ಭೂಸ್ವಾಧೀನ ಪ್ರಕ್ರಿಯೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಹುಬ್ಬಳ್ಳಿ:

ಗೋಕುಲ ರಸ್ತೆಯಿಂದ ಸಿದ್ಧಾರೂಢ ಸ್ವಾಮಿ ಮಠಕ್ಕೆ ಸಂಪರ್ಕ ಕಲ್ಪಿಸುವ ಆರ್‌.ಎನ್‌. ಶೆಟ್ಟಿ ರಸ್ತೆ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಸ್ಥಳೀಯ ನಾಗರಿಕರು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರಸ್ತೆ ಕಾಮಗಾರಿ ನಿಲ್ಲಿಸಲು ಹುನ್ನಾರ ನಡೆಸಿದ್ದಾರೆ ಎಂದು ಅಳಲು ತೋಡಿಕೊಂಡರು.

ಶಾಸಕ ಮಹೇಶ ಟೆಂಗಿನಕಾಯಿ, ಆರ್.ಎನ್. ಶೆಟ್ಟಿ ರಸ್ತೆಗೆ ಸಂಬಂಧಿಸಿದಂತೆ ನಾಲ್ಕೈದು ಬಾರಿ ಜಿಲ್ಲಾಧಿಕಾರಿ, ಪಾಲಿಕೆ ಸದಸ್ಯರು, ಪಾಲಿಕೆ ಆಯುಕ್ತರು, ಲೋಕೋಪಯೋಗಿ ಇಲಾಖೆ ಅಭಿಯಂತರರು, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಈ ರಸ್ತೆಗೆ ಸಂಬಂಧಿಸಿದಂತೆ ಇದ್ದ ಎಲ್ಲ ಅಡೆತಡೆಗಳನ್ನು ನಿವಾರಿಸಿ ಕೆಲಸ ಪ್ರಾರಂಭ ಮಾಡಿಸಲಾಗಿದೆ ಎಂದರು.

ಎಲ್‌ ಆ್ಯಂಡ್‌ ಟಿ ಕಾಮಗಾರಿ ಕೂಡ ಮಾಡಿಸಿಕೊಟ್ಟಿದ್ದು, ನಮಗೆ ಈಗಲೂ 4 ಲೈನ್ ಮಾಡಬೇಕು ಎಂಬ ಇಚ್ಛೆ ಇದೆ. ಆದರೆ, ಸಾರ್ವಜನಿಕರು ಕಷ್ಟ ತಪ್ಪಿಸಲು ರಸ್ತೆ ಕಾಮಗಾರಿ ಪೂರ್ಣಗೊಳಿಸಿ, ಭೂಸ್ವಾಧೀನ ಪ್ರಕ್ರಿಯೆಯು ನಡೆಯಲಿ, ನಾನೇ ಖುದ್ದಾಗಿ ನಿಂತು ಭೂಸ್ವಾಧೀನ ಪ್ರಕ್ರಿಯೆ ನಡೆಸಿಕೊಡುತ್ತೇನೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಯಾವುದೇ ಕಾರಣಕ್ಕೂ ರಸ್ತೆ ಕಾಮಗಾರಿ ನಿಲ್ಲಿಸುವುದಿಲ್ಲ. ಶಾಸಕರು ಹೇಳಿದಂತೆ ಭೂಸ್ವಾಧೀನ ಪ್ರಕ್ರಿಯೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡ ಟೆಂಡರ್ ಪ್ರಕ್ರಿಯೆ ಮುಗಿಸಿದ್ದು, ಈಗ ನಿಲ್ಲಿಸಿದರೆ ಮತ್ತೆ ಕಾಮಗಾರಿ ಮಾಡಲಾಗುವುದಿಲ್ಲ ಎಂದರು.

ಈ ವೇಳೆ ಶಾಸಕರು ಮಾತನಾಡಿ, ಪಾಲಿಕೆ ಸದಸ್ಯರು ಸೇರಿದಂತೆ ಎಲ್ಲರ ವಿಶ್ವಾಸ ತೆಗೆದುಕೊಂಡು ರಸ್ತೆ ಕಾಮಗಾರಿ ಆರಂಭಿಸಲಾಗಿದ್ದು, ಹುಬ್ಬಳ್ಳಿ ಅಭಿವೃದ್ಧಿಗೆ ನಾನು ಸದಾ ಬದ್ಧ. ರಸ್ತೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಯಾರೇ ಬಂದು ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಪಡಿಸಬಾರದು. ಭಿನ್ನಾಭಿಪ್ರಾಯಗಳಿದ್ದರೆ ಬನ್ನಿ ನಾವೆಲ್ಲರೂ ಸಭೆ ಮಾಡಿ ಇತ್ಯರ್ಥ ಪಡಿಸೋಣ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕರ್ಸ್ ಕಾಲನಿ, ಸಹದೇವನಗರ , ಕೇತೇಶ್ವರ ಕಾಲನಿ, ಜಗದೀಶ ನಗರ, ನಾಗಲಿಂಗ ನಗರ ಹಾಗೂ ಸಹಸಾರ್ಜುನ ನಗರ ನಿವಾಸಿಗಳು ಇದ್ದರು.