ಸಾರಾಂಶ
ಕುಂದಗೋಳ: ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ರೈತರಿಗೆ ಸಾಲದ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದು, ಇದರಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿರುವ ಶಾಸಕ ಎಂ.ಆರ್. ಪಾಟೀಲ, ನೋಟಿಸ್ ನೀಡಿದ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ತ್ರೈಮಾಸಿಕ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್‌ಗಳ ಅಧಿಕಾರಿಗಳ ಸಭೆ ಕರೆದು ಯಾವುದೇ ಕಾರಣಕ್ಕೂ ರೈತರಿಗೆ ನೋಟಿಸ್ ನೀಡದಂತೆ ತಾಕೀತು ಮಾಡಬೇಕೆಂದು ತಾಪಂ ಇಒ ಜಗದೀಶ ಅವರಿಗೆ ಸೂಚಿಸಿದರು.
ಕೃಷಿ ಇಲಾಖೆಯಲ್ಲಿ ಬೆಳೆ ವಿಮೆ ವಿಷಯದಲ್ಲಿ ಏಜೆಂಟರ ಹಾವಳಿಯನ್ನು ತಪ್ಪಿಸಿ, ರೈತರಿಗೆ ವಿಮೆ ಕುರಿತು ಸರಿಯಾದ ಮಾಹಿತಿ ನೀಡಬೇಕು. ಅಲ್ಲದೆ, ರಸಗೊಬ್ಬರವನ್ನು ಸರಿಯಾಗಿ ವಿತರಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗೆ ಸೂಚಿಸಿದರು.ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಶಿಕ್ಷಣ ಇಲಾಖೆಯ ಹಿರೇಹರಕುಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಡು ಮಕ್ಕಳ ಶಾಲೆಗೆ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡುತ್ತಿಲ್ಲ ಎಂದು ಗ್ರಾಮ ಶಿಕ್ಷಣ ಸಮಿತಿಯವರು ಸಭೆಯಲ್ಲಿ ದೂರು ನೀಡಿದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಸಮಸ್ಯೆಯನ್ನು ಸರಿಪಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾದೇವಿ ಮಾಡಲಗೇರಿ ಅವರಿಗೆ ಸೂಚಿಸಿದರು. ಇದಕ್ಕಾಗಿ ಪ್ರತ್ಯೇಕ ಸಭೆ ಕರೆಯುವಂತೆಯೂ ನಿರ್ದೇಶನ ನೀಡಿದರು.ಬಸಾಪುರ ಮತ್ತು ಹಲವು ಗ್ರಾಮಗಳಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳನ್ನು ತಕ್ಷಣ ಸರಿಪಡಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.
ಪೌರಕಾರ್ಮಿಕರನ್ನು ಸರ್ಕಾರದ ಮಾನದಂಡಗಳ ಪ್ರಕಾರ ಸರಿಯಾಗಿ ನೇಮಕ ಮಾಡಿಕೊಳ್ಳುವಂತೆ ಪಪಂ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ಅವರಿಗೆ ಸೂಚಿಸಲಾಯಿತು. ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ ಔಷಧ ಮತ್ತು ಮಾತ್ರೆಗಳನ್ನು ಸರಿಯಾಗಿ ವಿತರಿಸಬೇಕು. ಅವುಗಳ ದಾಸ್ತಾನು ಪರಿಶೀಲಿಸಿಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗೆ ಸೂಚಿಸಲಾಯಿತು.ಗ್ರಾಮೀಣ ಭಾಗದ ಕೆಲವು ರಸ್ತೆಗಳು ಹದಗೆಟ್ಟಿದ್ದು, ರಸ್ತೆಗಳನ್ನು ಸರಿಪಡಿಸಲು ಜಿಪಂ ಉಪ ವಿಭಾಗದ ಅಧಿಕಾರಿಗೆ ನಿರ್ದೇಶನ ನೀಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದು ಕೆಲಸ ನಿರ್ವಹಿಸಬೇಕು. ಕೆಲಸದಲ್ಲಿ ಯಾರಾದರೂ ಅಲಕ್ಷ್ಯ ತೋರಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ವರದಿಗಳನ್ನು ಮಂಡಿಸಿದರು.ಈ ವೇಳೆ ತಹಸೀಲ್ದಾರ್ ರಾಜು ಮಾವರಕರ, ತಾಪಂ ಇಒ ಜಗದೀಶ ಕಮ್ಮಾರ, ಕೃಷಿ ಅಧಿಕಾರಿ ಭಾರತಿ ಮೆಣಸಿನಕಾಯಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೀನಾಕ್ಷಿ ಗುದಗಿ, ಕೆಡಿಪಿ ಸದಸ್ಯರಾದ ವೆಂಕನಗೌಡ ಪಾಟೀಲ, ಹುಸೇನ ಹುಬ್ಬಳ್ಳಿ, ತಮ್ಮನಗೌಡ ಪಾಟೀಲ, ರಾಘವೇಂದ್ರ ಕುಸುಗಲ್, ಮಲ್ಲೇಶ ಬೆಳವಡಿ, ಈರಮ್ಮ ಬಾರಕೇರ ಹಾಗೂ ಹಾಗೂ ಗ್ರಾಪಂ ಪಿಡಿಒ ಸೇರಿದಂತೆ ಹಲವರಿದ್ದರು.