ಬಡತನ, ಅಜ್ಞಾನ ಅಥವಾ ಅಸಹಾಯಕತೆಯಿಂದ ಯಾರೂ ನ್ಯಾಯದಿಂದ ವಂಚಿತರಾಗಬಾರದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಬಡತನ, ಅಜ್ಞಾನ ಅಥವಾ ಅಸಹಾಯಕತೆಯಿಂದ ಯಾರೂ ನ್ಯಾಯದಿಂದ ವಂಚಿತರಾಗಬಾರದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ಹೇಳಿದರು.ನಗರಸಭೆ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಯೋಜಿಸಿದ್ದ ‘ಪ್ಯಾರಾ ಲೀಗಲ್ ವಾಲಂಟಿಯರ್‌ಗಳಿಗೆ’ (ಪಿಎಲ್‌ವಿ) ಎರಡು ದಿನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾನೂನಿನ ಅಜ್ಞಾನ ಕ್ಷಮಾರ್ಹವಲ್ಲ ಎಂಬ ತತ್ವದಂತೆ ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನು ಜ್ಞಾನ ತಲುಪಬೇಕು. ಜನಸಾಮಾನ್ಯರು ಮತ್ತು ನ್ಯಾಯಾಂಗ ವ್ಯವಸ್ಥೆಯ ನಡುವೆ ಪ್ಯಾರಾ ಲೀಗಲ್ ವಾಲಂಟಿಯರ್‌ಗಳು ಸೇತುವೆಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಪಿಎಲ್‌ವಿಗಳಿಗೆ ನೀಡಲಾಗುವ ಗುರುತಿನ ಚೀಟಿಯು ದರ್ಪ ಅಥವಾ ಅಧಿಕಾರ ತೋರಿಸುವುದಕ್ಕಲ್ಲ, ಬದಲಾಗಿ ಹೆಮ್ಮೆಯಿಂದ ಸಮಾಜಸೇವೆ ಮಾಡಲು ನೀಡಿದ ಅವಕಾಶ ಎಂದರು.ಕಳೆದ ಬಾರಿ ತರಬೇತಿಯನ್ನು ಕೇವಲ ಡಿಎಲ್‌ಎಸ್‌ಎಗೆ ಸೀಮಿತಗೊಳಿಸಲಾಗಿತ್ತು. ಆದರೆ, ಈ ಬಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಒಳಗೊಂಡಂತೆ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಇದರಿಂದ ಇಲಾಖೆಗಳಿಗೂ ಪಿಎಲ್‌ವಿಗಳ ಅಸ್ತಿತ್ವ ಮತ್ತು ಕಾರ್ಯವೈಖರಿ ತಿಳಿಯಲಿದೆ. ಪಿಎಲ್‌ವಿಗಳು ಈ ಹಿಂದೆ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳು, ಎದುರಿಸಿದ ಸವಾಲುಗಳ ಬಗ್ಗೆ ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಮುಕ್ತ ಚರ್ಚೆ ನಡೆಯಲಿದೆ ಎಂದು ಹೇಳಿದರು.ಸಮಾಜದಲ್ಲಿ ಜ್ವಲಂತ ಸಮಸ್ಯೆಯಾಗಿರುವ ಬಾಲ್ಯವಿವಾಹ ತಡೆಯುವುದು, ಮತದಾರರ ಪಟ್ಟಿ ಹಾಗೂ ‘ಎಸ್‌ಐಆರ್’ ಹಂತದಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ನೆರವಾಗುವುದು, ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆ ಮತ್ತು ನಾಗರಿಕರ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಾಲಂಟಿಯರ್‌ಗಳು ಸಕ್ರಿಯವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾನೂನಿನ ಮೂಲ ಅರಿವು: ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ, ಸಮಾಜದಲ್ಲಿ ಸುವ್ಯವಸ್ಥೆ ಹಾಗೂ ಕಾನೂನಿನ ಆಡಳಿತ ನೆಲೆಸಬೇಕಾದರೆ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಮೂಲ ಅರಿವಿರಬೇಕು. ಕಾನೂನು ಅರಿವು ಹೊಂದುವುದು ಕೇವಲ ಹಕ್ಕಷ್ಟೇ ಅಲ್ಲ, ಅದು ಪ್ರತಿಯೊಬ್ಬರ ಕರ್ತವ್ಯವೂ ಹೌದು ಎಂದರು.ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಸ್ಪಷ್ಟತೆ ಇಲ್ಲದಿದ್ದಾಗ ಅನಗತ್ಯ ವಿಳಂಬ, ಹಣ ಹಾಗೂ ಸಮಯದ ಪೋಲು ಉಂಟಾಗುತ್ತದೆ. ಇದನ್ನು ತಡೆಯುವಲ್ಲಿ ಪ್ಯಾರಾ ಲೀಗಲ್ ವಾಲಂಟಿಯರ್‌ಗಳ ಪಾತ್ರ ದೊಡ್ಡದಿದೆ. ಈ ತರಬೇತಿ ಶಿಬಿರದಲ್ಲಿ ಯಾವುದೇ ಮುಜುಗರವಿಲ್ಲದೇ ತಮ್ಮ ಸಂದೇಹಗಳನ್ನು ಕೇಳಿ ನಿವಾರಿಸಿಕೊಳ್ಳಬೇಕು. ಇಲ್ಲಿ ಗಳಿಸಿದ ಜ್ಞಾನವನ್ನು ಸಮಾಜದ ಕೊನೆಯ ವ್ಯಕ್ತಿಗೆ ತಲುಪಿಸಿ ಸಶಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್ ಮಾತನಾಡಿ, ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವುದು ಸುಲಭವೆನಿಸಿದರೂ, ಸಮಾಜದ ನಿರೀಕ್ಷೆ ಮತ್ತು ಜನರ ಒತ್ತಡಗಳ ನಡುವೆ ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆ ಸವಾಲಿನಿಂದ ಕೂಡಿದೆ. ಇಂತಹ ಸಂದರ್ಭ ನೊಂದವರಿಗೆ ಸೂಕ್ತ ಕಾನೂನು ಅರಿವು ಮೂಡಿಸಿ ನ್ಯಾಯ ದೊರಕಿಸಿಕೊಡಲು ಪ್ಯಾರಾ ಲೀಗಲ್ ವಾಲಂಟಿಯರ್‌ಗಳ ಪಾತ್ರ ಅತ್ಯಂತ ಪ್ರಮುಖ ಎಂದು ತಿಳಿಸಿದರು.ಠಾಣೆಗೆ ಬರುವ ಸಾರ್ವಜನಿಕರು ಹಾಗೂ ಸ್ಥಳೀಯ ಮುಖಂಡರು ಕೋರ್ಟ್‌ಗೆ ಅಲೆಯಲು ಇಷ್ಟಪಡುವುದಿಲ್ಲ. ಪೊಲೀಸ್ ಠಾಣೆಯಲ್ಲೇ ಸಂಧಾನ ಮಾಡಿ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸುತ್ತಾರೆ. ವಿಶೇಷವಾಗಿ ಮಹಿಳಾ ಪೊಲೀಸ್ ಠಾಣೆಗೆ ಬರುವ ಗಂಡ-ಹೆಂಡತಿಯರ ಕೌಟುಂಬಿಕ ಕಲಹದ ಶೇ.99 ರಷ್ಟು ಪ್ರಕರಣಗಳಲ್ಲಿ ಯಾರಿಗೂ ದೂರು ದಾಖಲಿಸಿ ಜೈಲಿಗೆ ಕಳುಹಿಸುವುದು ಬೇಕಾಗಿಲ್ಲ. ಬದಲಿಗೆ ಹಿರಿಯರ ಉಪಸ್ಥಿತಿಯಲ್ಲಿ ಕೌನ್ಸೆಲಿಂಗ್ ನಡೆಸಿ ಬುದ್ಧಿವಾದ ಹೇಳಿ ರಾಜಿ ಮಾಡಿಸುವುದನ್ನೇ ಬಯಸುತ್ತಾರೆ ಎಂದರು.
ಆಡಳಿತ ವ್ಯವಸ್ಥೆ ಮತ್ತು ನ್ಯಾಯಾಂಗದಲ್ಲಿ ನೈಸರ್ಗಿಕ ನ್ಯಾಯ ಅತ್ಯಂತ ಪ್ರಮುಖವಾದುದು. ಯಾವುದೇ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಆತನಿಗೆ ತನ್ನ ವಾದ ಮಂಡಿಸಲು ಅಥವಾ ಸ್ಪಷ್ಟನೆ ನೀಡಲು ಸೂಕ್ತ ಅವಕಾಶ ನೀಡಲೇಬೇಕು. ನೋಟಿಸ್ ತಲುಪಿಸುವುದು, ವಿಚಾರಣೆಗೆ ಅವಕಾಶ ನೀಡುವುದು ಸಣ್ಣ ವಿಷಯದಂತೆ ಕಂಡರೂ, ಕಾನೂನಿನ ದೃಷ್ಟಿಯಲ್ಲಿ ಇದು ಅತ್ಯಂತ ನಿರ್ಣಾಯಕ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಹೇಳಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಉಪಸ್ಥಿತರಿದ್ದರು.