ರಾಜಸ್ವ ಸಂಗ್ರಹ ಗುರಿ ಬಗ್ಗೆ ನಿರ್ಲಕ್ಷ್ಯ ಬೇಡ

| Published : Jun 21 2024, 01:10 AM IST / Updated: Jun 21 2024, 12:28 PM IST

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

 ಚಿತ್ರದುರ್ಗ :  ಮುಖ್ಯ ಖನಿಜ ಮತ್ತು ಉಪ ಖನಿಜ ಗಣಿ ಗುತ್ತಿಗೆಗಳಿಗೆ ನಿಗಧಿ ಪಡಿಸಿರುವ ರಾಜಸ್ವ ಸಂಗ್ರಹದ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ (ಗಣಿ) ಸಮಿತಿ, ಜಿಲ್ಲಾ ಮರಳು ಸಮಿತಿ ಹಾಗೂ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜಸ್ವ ಸಂಗ್ರಹದ ಬಗ್ಗೆ ಉದಾಸೀನ ತೋರುವಂತಿಲ್ಲ. ಗಣಿ ಗುತ್ತಿಗೆಗಳಿಗೆ ನಿಗಧಿಪಡಿಸಿರುವ ರಾಜಸ್ವದ ಗುರಿಯನ್ನು ತಲುಪುವ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದರು.

ಜಿಲ್ಲಾ ಮತ್ತು ತಾಲೂಕು ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಪ್ರತ್ಯೋಜಿಸಲಾದ ಅಧಿಕಾರದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಹಾಗೂ ದಾಸ್ತಾನು ತಡೆಯಲು ಮುಂದಾಗಬೇಕು. ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕಂದಾಯ, ಪೊಲೀಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಪ್ರಕರಣ ದಾಖಲಿಸಲು ಕ್ರಮವಹಿಸಬೇಕು ಎಂದು ಹೇಳಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್ ಮಾತನಾಡಿ, ವೇದಾಂತ ಮೀನರಲ್ಸ್ ಅವರು ಗಣಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದ ಕಾರಣ ಇಲಾಖೆ ರಾಜಸ್ವ ಸಂಗ್ರಹದ ಗುರಿ ತಲುಪಲು ಸಾಧ್ಯವಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ನಿಗಧಿಪಡಿಸಿರುವ ರಾಜಸ್ವ ಗುರಿ ತಲುಪಲು ಕ್ರಮವಹಿಸಲಾಗುವುದು ಎಂದರು.

ಜಿಲ್ಲಾ ವ್ಯಾಪ್ತಿಯಲ್ಲಿ ಕಲ್ಲು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಮಂಜೂರಾತಿಗೆ 160 ಅರ್ಜಿಗಳು ಬಾಕಿ ಇದ್ದು, ಒಂದು ತಿಂಗಳೊಳಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಿರಾಪೇಕ್ಷಣ ಪತ್ರ ನೀಡುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಸೂಚನೆ ನೀಡಿದರು. ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಬಾಕಿ ಇರುವ ಅರ್ಜಿ ಪಟ್ಟಿ ಮಾಡಿ ಮುಂದಿನ ಸಭೆಯೊಳಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳ ಹಾಗೂ ಪಟ್ಟಾ ಜಮೀನುಗಳಲ್ಲಿ ದಾಸ್ತಾನು ಇರಿಸಲಾಗಿರುವ ಕಬ್ಬಿಣದ ಅದಿರು ರಾಶಿಗಳನ್ನು ನಿಯಮಾನುಸಾರ ವಿಲೇ ಪಡಿಸಲು ಹಾಗೂ ಕಂದಾಯ, ಅರಣ್ಯ ಇಲಾಖೆ ವತಿಯಿಂದ ನಿರಾಪೇಕ್ಷಣ ಪತ್ರ ಸ್ವೀಕೃತಿಯಾದ ಪ್ರದೇಶಗಳಿಗೆ ಸಂಬಂಧಿಸಿದಂತೆ ನಿಯಾಮಾನುಸಾರ ಕ್ರಮವಹಿಸಲು ಸಭೆ ಅನುಮೋಧಿಸಿತು. ಜಿಲ್ಲೆಯ ಮೊಳಕಾಲ್ಮೂರು ತಾಲೂಕು ವ್ಯಾಪ್ತಿಯಲ್ಲಿನ ಪಟ್ಟಾ ಜಮೀನುಗಳಲ್ಲಿ ಮರಳು ಗಣಿ ಗುತ್ತಿಗೆ ಕೋರಿ ಸ್ವೀಕೃತಿಯಾದ ಅರ್ಜಿಗಳ ಮಂಜೂರಾತಿಗೆ ನಿಯಾಮಾನುಸಾರ ಕ್ರಮವಹಿಸಲು ಸಭೆಯು ಸೂಚಿಸಿತು.

ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ನದಿ ಪಾತ್ರದಲ್ಲಿ ಟೆಂಡರ್-ಕಂ-ಹರಾಜು ಮೂಲಕ ಮಂಜೂರು ಮಾಡಲಾದ ಮರಳು ಗಣಿ ಗುತ್ತಿಗೆ, ಮರಳು ಲೈಸೆನ್ಸ್ ಪ್ರದೇಶಗಳ ಅವಧಿಯು ಮುಕ್ತಾಯಗೊಂಡಿದೆ. ಕೆಲವೊಂದು ಮರಳು ಸ್ಟಾಕ್‍ಯಾರ್ಡ್ ಪ್ರದೇಶಗಳಲ್ಲಿ ದಾಸ್ತಾನಿರುವ ಮರಳು ವಿಲೇವಾರಿ ಮಾಡುವ ಪೂರ್ವದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಗುಣಮಟ್ಟದ ವರದಿ ಪಡೆದು ಕ್ರಮವಹಿಸಲು ಸಭೆಯು ಸೂಚಿಸಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಉಪ ವಿಭಾಗಾಧಿಕಾರಿ ಎಂ.ಕಾರ್ತಿಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್.ಎಂ.ಕಾಳೇ ಸಿಂಘೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ.ಎಸ್.ನಾಗೇಂದ್ರಪ್ಪ, ಭೂ ವಿಜ್ಞಾನಿಗಳಾದ ನಯಾಜ್ ಖಾನ್, ಉಮಾಪತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.