ಸಾರಾಂಶ
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ
ಕನ್ನಡಪ್ರಭ ವಾರ್ತೆ ಶಿರಸಿಕಾನೂನು ವಿಧಿ-ವಿಧಾನ ಅನುಸರಿಸದೇ, ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಪೊಲೀಸ್ ಇಲಾಖೆಯು ಅರಣ್ಯ ಇಲಾಖೆಗೆ ರಕ್ಷಣೆ ಮತ್ತು ಬೆಂಬಲ ನೀಡಕೂಡದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರಿಗೆ ಮನವಿ ಮಾಡಿದರು.
ಶನಿವಾರ ನಗರದ ಡಿವೈಎಸ್‌ಪಿ ಕಚೇರಿಯಲ್ಲಿ ನಗರದ ವಿವಿಧ ಸಂಘಟನೆಗಳ ಪ್ರಮುಖರೊಂದಿಗೆ ಭೇಟಿಯಾಗಿ ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳ ಮಾಹಿತಿ ನೀಡಿದರು.ಅರಣ್ಯ ಸಿಬ್ಬಂದಿ ಅರಣ್ಯವಾಸಿಗಳೊಂದಿಗೆ ಸಾಗುವಳಿ ಕ್ಷೇತ್ರದಲ್ಲಿ ಪದೇ ಪದೇ ಆತಂಕ, ದೌಜನ್ಯ ಜರುಗುತ್ತಿರುವ ಸಂದರ್ಭದಲ್ಲಿ ಹೋರಾಟಗಾರರ ವೇದಿಕೆಯು ಕಾನೂನಾತ್ಮಕ ಆಕ್ಷೇಪವನ್ನು ಅರಣ್ಯ ಅಧಿಕಾರಿಯೊಂದಿಗೆ ಗಮನಕ್ಕೆ ತಂದಾಗಲೂ ಅರಣ್ಯ ಸಿಬ್ಬಂದಿ ಅಪಕೃತ್ಯ ನಿಯಂತ್ರಣಕ್ಕೆ ಬಂದಿಲ್ಲ. ಅರಣ್ಯವಾಸಿಗಳ ಕಬ್ಜಾ ಬೋಗ್ವೋಟೆಯಲ್ಲಿದ್ದು, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದಾಗಲೂ ಮತ್ತು ಅರ್ಜಿ ವಿಚಾರಣೆ ಹಂತದಲ್ಲಿ ಅರಣ್ಯ ಸಿಬ್ಬಂದಿ ಒಕ್ಕಲೆಬ್ಬಿಸಲು ಪೊಲೀಸ್ ಇಲಾಖೆಯ ಬೆಂಬಲ ಪಡೆಯುತ್ತಿರುವುದು ವಿಷಾದನೀಯ. ಈ ಹಿಂದೆ ಕಾನೂನುಬಾಹಿರವಾಗಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆದಿರುವ ಘಟನೆಯ ಮಾಹಿತಿ ವಿವರಿಸಿದರು. ಕಾನೂನುಬಾಹಿರ ಅರಣ್ಯ ಸಿಬ್ಬಂದಿ ಕೃತ್ಯಕ್ಕೆ ಇಲಾಖೆ ನೆರವು ನೀಡಬಾರದೆಂದು ಚರ್ಚೆಯ ಸಂದರ್ಭ ಎಸ್ಪಿ ಗಮನಕ್ಕೆ ತಂದರು.
ಮಾನವೀಯ ಮೌಲ್ಯದ ಭೂಮಿ ಹಕ್ಕಿನ ಕಾನೂನು ಬದ್ಧ ಹೋರಾಟಕ್ಕೆ ಇಲಾಖೆ ಸಹಕರಿಸುತ್ತದೆ ಎಂದು ಎಸ್ಪಿ ಹೇಳಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ನಾಯ್ಕ, ಡಿವೈಎಸ್ಪಿ ಗೀತಾ ಪಾಟೀಲ್, ವೇದಿಕೆಯ ಜಿಲ್ಲಾ ಸಂಚಾಲಕ ಇಬ್ರಾಹಿಂ ಸಾಬ ಗೌಡಳ್ಳಿ ಉಪಸ್ಥಿತರಿದ್ದರು.ಶಿಸ್ತು ಬದ್ಧ ಹೋರಾಟ
ಅರಣ್ಯ ಭೂಮಿ ಹಕ್ಕಿಗಾಗಿ ನಿರಂತರ 34 ವರ್ಷದ ಸಂಘಟನೆ ಮತ್ತು ಹೋರಾಟದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯಿಂದ ಕಾನೂನು ಬದ್ಧ ಹೋರಾಟ ಸಂಘಟಿಸಿಕೊಂಡು ಬಂದಿರುವುದು ಹೋರಾಟದ ವಿಶೇಷತೆಯಾಗಿದೆ. ಅಲ್ಲದೇ, ಭೂಮಿ ಹಕ್ಕಿಗಾಗಿ ಸುಪ್ರೀಂಕೋರ್ಟ್‌ನಲ್ಲಿಯೂ ಕಾನೂನಾತ್ಮಕವಾಗಿ ಹೋರಾಟಗಾರರ ವೇದಿಕೆಯು ಶ್ರಮಿಸುತ್ತಿರುವ ಮಾಹಿತಿಯನ್ನು ಎಸ್ಪಿ ಗಮನಕ್ಕೆ ತರಲಾಯಿತು ಎಂದು ರವೀಂದ್ರ ನಾಯ್ಕ ತಿಳಿಸಿದರು.