ದೇಶದ ಜನಸಂಖ್ಯೆಯಲ್ಲಿ ಶೇ.40 ರಷ್ಟು ಜನ 18 ವರ್ಷದೊಳಗಿನವರಿದ್ದಾರೆ. ಕಾನೂನು ಜಾರಿಯಲ್ಲಿದ್ದರೂ ಬಾಲಕಾರ್ಮಿಕ ಪದ್ಧತಿ, ಮಕ್ಕಳ ಶೋಷಣೆ ಮತ್ತು ಬಾಲ್ಯವಿವಾಹ ನಡೆಯುತ್ತಿದ್ದು, ಇಂದಿಗೂ ಸವಾಲಾಗಿ ಉಳಿದಿವೆ
ಹೊಸಪೇಟೆ: ಮಕ್ಕಳು ಉತ್ತಮ ಶಿಕ್ಷಣ ಪಡೆದು ಜ್ಞಾನವಂತರಾದಾಗ ಮಾತ್ರ ತಮ್ಮ ಹಕ್ಕು ಪಡೆಯಲು ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗುತ್ತದೆ. ವಿಶೇಷವಾಗಿ ಗ್ರಾಮೀಣ ಭಾಗ ಹಾಗೂ ತಾಂಡಾಗಳಲ್ಲಿ ನಡೆಯುವ ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿ ತಡೆಯಲು ಮಕ್ಕಳೇ ಜಾಗೃತರಾಗಿ ಮುಂದಾಗಬೇಕು ಎಂದು ಸ್ನೇಹ ಸಂಸ್ಥೆ ನಿರ್ದೇಶಕ ಟಿ.ರಾಮಾಂಜನೇಯ ಕರೆ ನೀಡಿದರು.
ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ಯುನಿಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಜಿಲ್ಲಾ ಸ್ವಯಂ ಸೇವಾ ಸಂಸ್ಥೆ ಒಕ್ಕೂಟ ಹಾಗೂ ಸ್ನೇಹ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಸಂಸತ್ 2026 ರ ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದ ಜನಸಂಖ್ಯೆಯಲ್ಲಿ ಶೇ.40 ರಷ್ಟು ಜನ 18 ವರ್ಷದೊಳಗಿನವರಿದ್ದಾರೆ. ಕಾನೂನು ಜಾರಿಯಲ್ಲಿದ್ದರೂ ಬಾಲಕಾರ್ಮಿಕ ಪದ್ಧತಿ, ಮಕ್ಕಳ ಶೋಷಣೆ ಮತ್ತು ಬಾಲ್ಯವಿವಾಹ ನಡೆಯುತ್ತಿದ್ದು, ಇಂದಿಗೂ ಸವಾಲಾಗಿ ಉಳಿದಿವೆ. ನಗರ ಪ್ರದೇಶಗಳಲ್ಲಿ ಕಾನೂನಿನ ಭಯದಿಂದ ಬಾಲ್ಯವಿವಾಹ ನಿಯಂತ್ರಣದಲ್ಲಿದ್ದರೆ ಗ್ರಾಮೀಣ ಪ್ರದೇಶ ಮತ್ತು ತಾಂಡಾಗಳಲ್ಲಿ ಈಗಲೂ ನಡೆಯುತ್ತಿರುವುದು ಕಳವಳಕಾರಿ. ಹೆಣ್ಣುಮಕ್ಕಳು 18 ವರ್ಷ ತುಂಬುವವರೆಗೂ ಮದುವೆಯಾಗುವುದಿಲ್ಲ ಎಂದು ಪೋಷಕರಿಗೆ ದೃಢವಾಗಿ ಹೇಳಬೇಕು. ಅಗತ್ಯವಿದ್ದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಕೆಲವು ಗ್ರಾಮೀಣ ಶಾಲೆಗಳಲ್ಲಿ ಕೊಠಡಿ, ಶೌಚಾಲಯಗಳ ಕೊರತೆ ಹಾಗೂ ಅಗತ್ಯ ಕಲಿಕಾ ಮಟ್ಟದ ಕೊರತೆ ಕಂಡುಬರುತ್ತಿದೆ. ಮಕ್ಕಳು ನೇರವಾಗಿ ಸಂಘಟಿತರಾಗಿ ಹೋರಾಡಲು ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಅವರ ಸಮಸ್ಯೆ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತರಲು ಈ ಸಂವಾದ ಆಯೋಜಿಸಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ನಡೆಸಿದ ಮಕ್ಕಳ ಸಂವಾದದ ಮಾದರಿಯಲ್ಲೇ ಈ ಕಾರ್ಯಕ್ರಮ ರೂಪುಗೊಂಡಿದೆ. ಇದರ ಫಲವಾಗಿ ಇಂದು ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ ಮತ್ತು ಪಾದರಕ್ಷೆ ದೊರೆಯುತ್ತಿವೆ ಎಂದರು.ಹದಿಹರೆಯದ ಆಕರ್ಷಣೆಗೆ ಒಳಗಾಗಿ ಭವಿಷ್ಯ ಹಾಳು ಮಾಡಿಕೊಳ್ಳದೆ ಜವಾಬ್ದಾರಿಯಿಂದ ನಡೆಯಬೇಕು. ಜ್ಞಾನಾರ್ಜನೆಗಾಗಿ ಪ್ರತಿದಿನ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡು, ಮಹಾನ ಸಾಧಕರ ಆದರ್ಶದೊಂದಿಗೆ ದೇಶದ ಉನ್ನತ ಸ್ಥಾನಕ್ಕೇರುವ ಗುರಿ ಹೊಂದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ನಾಗವೇಣಿ, ಕ್ಷೇತ್ರ ಶಿಕ್ಷಣ ಇಲಾಖೆ ಇಸಿಒ ರಾಜು, ಪತ್ರಕರ್ತ ರಾಜು, ಸಾಕಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಾಳಿದಾಸ, ಭೀಮ ಸಂಘ ದುಡಿಯೋ ಮಕ್ಕಳ ಸಂಘ ಸಂಸ್ಥೆ ಕ್ಷೇತ್ರ ಸಂಯೋಜಕ ಎಸ್.ಕೊಟ್ರೇಶ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.