ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಒಕ್ಕಲಿಗ ಸಮುದಾಯಕ್ಕೆ ಪ್ರಪಂಚದಲ್ಲಿಯೇ ಒಂದು ಘನತೆ, ಗೌರವವಿದೆ. ರಾಜಕೀಯ ಕಾರಣಕೋಸ್ಕರ ಬೇರೆ ಬೇರೆ ಪಕ್ಷದಲ್ಲಿರುವ ನಾಯಕರು ಮಾತನಾಡುವಾಗ ಎಚ್ಚರಿಕೆವಹಿಸಿ, ಸಮಾಜದ ಮನಸ್ಸುಗಳಿಗೆ ನೋವಾಗದಂತೆ ಮಾಡುವುದು ಅತ್ಯಂತ ಸೂಕ್ತ ಎಂದು ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಹೇಳಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಾಜ್ಯ ಒಕ್ಕಲಿಗರ ಸಂಘ ಹಾಗೂ ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜನ್ಮ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಕರ್ನಾಟಕ ಒಟ್ಟಾರೆ ಬಜೆಟ್‌ಗೆ ಶೇ. 65 ರಷ್ಟು ತೆರಿಗೆಯನ್ನು ನೀಡುತ್ತಿರುವುದು ಬೆಂಗಳೂರು. ಇಂತಹ ಬೆಂಗಳೂರು ನಗರವನ್ನು ಕಟ್ಟಿದ ಮಹಾರಾಜ ಕೆಂಪೇಗೌಡರು. ಅವರ ಆಡಳಿತ ವೈಖರಿ ಇಡೀ ದೇಶಕ್ಕೆ ಮಾದರಿಯಾಗಿದೆ. ಎಲ್ಲ ವರ್ಗದ ಸಮದಾಯಗಳ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಯ ದೂರದೃಷ್ಟಿ ಹೊಂದಿದ್ದ ಕೆಂಪೇಗೌಡರು, ಕೆರೆ ಕಟ್ಟೆಗಳು, ದೇವಾಲಯಗಳು, ಪೇಟೆಗಳನ್ನು ಕಟ್ಟಿ, ಹಿಂದುಳಿದ, ಕಾಯಕ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದ್ದರು ಎಂದರು.
ಕೆಂಪೇಗೌಡರು ಕರ್ನಾಟಕಕ್ಕೆ ಅಷ್ಟೇ ಅಲ್ಲ ಇಡೀ ದಕ್ಷಿಣ ಭಾರತದ ಸಾಂಸ್ಕೃತಿಕ ರಾಯಭಾರಿ ಇದ್ದಂತೆ. ಮೊದಲ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಪೇಗೌಡ ಜಯಂತಿ ಆಚರಣೆಗೆ ತಂದರು. ಅಲ್ಲದೆ ಒಕ್ಕಲಿಗರ ಸಂಘದ ಎಲ್ಲಾ ಬೇಡಿಕೆಗಳಿಗೂ ಮನ್ನಣೆ ನೀಡಿ, ಸಮಾಜದ ಏಳಿಗೆಗೆ ಬೇಕಾದ ಅಗತ್ಯ ನೆರವನ್ನು ಆಳಿದ ಎಲ್ಲಾ ಪಕ್ಷಗಳೂ ನೀಡಿವೆ. ತುಮಕೂರು ಒಕ್ಕಲಿಗರ ಸಂಘದ ಬೇಡಿಕೆಯಂತೆ ತುಮಕೂರು ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಇಡಲು ಜಿಲ್ಲಾಡಳಿತ ಮುಂದಾಗಬೇಕು. ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಸಹ ಮಾತುಕತೆ ನಡೆಸಲಾಗುವುದು ಎಂದು ನುಡಿದರು.ಒಕ್ಕಲಿಗರ ಸಂಘ ಹಲವು ಅಡೆತಡೆಗಳ ನಡುವೆಯೂ ಸಮುದಾಯದ ಶೈಕ್ಷಣಿಕ ಬೆಳವಣಿಗೆಗೆ ಸಾಕಷ್ಟು ಶ್ರಮವಹಿಸಿದೆ. ಹಾದಿ ತಪ್ಪಿರುವ ಸಂಘವನ್ನು ಸರಿದಾರಿಗೆ ತರುವ ಕೆಲಸವನ್ನು ಈಗಿನ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಮಾಡುತಿದ್ದಾರೆ. ಅದೇ ರೀತಿ ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದಲ್ಲಿರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಪ್ರಯತ್ನ ನಡೆಸಬೇಕಾಗಿದೆ. ಜನಾಂಗದಿಂದ ಆಯ್ಕೆಯಾದ ಶಾಸಕರು, ಸಂಸದರು ಕೇವಲ ಮತ ಕೇಳಲು ಮಾತ್ರ ಜನಾಂಗದವರ ಮುಂದೆ ಬರುವುದಲ್ಲ. ಇಂತಹ ಸಮಾರಂಭಗಳಲ್ಲಿಯೂ ಪಾಲ್ಗೊಂಡು ಆಯೋಜಕರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಸಮಾಜಕ್ಕಿಂತ ಯಾರು ದೊಡ್ಡವರಲ್ಲ. ಸಮಾಜ ಕರೆದಾಗ ತಾವು ಬರಬೇಕು ಎಂದು ಚಾಟಿ ಬೀಸಿದರು.ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಎನ್.ಬಾಲಕೃಷ್ಣ ಮಾತನಾಡಿ, ರಾಜ್ಯದಲ್ಲಿ ಸುಮಾರು 1.30 ಕೋಟಿ ಒಕ್ಕಲಿಗರಿದ್ದಾರೆ. ಆದರೆ ಕಾಂತರಾಜು ಅಯೋಗದ ವರದಿಯಲ್ಲಿ ಉಪಪಂಗಡಗಳ ಹೆಸರಿನಲ್ಲಿ ಒಕ್ಕಲಿಗ ಜನಾಂಗದ ಸಂಖ್ಯೆಯನ್ನು ಅತಿ ಕಡಿಮೆ ತೋರಿಸಲಾಗಿದೆ. ಆ ವರದಿಯನ್ನು ಕೈಬಿಟ್ಟು ಹೊಸದಾಗಿ ನಿಜವಾದ ಜಾತಿ ಗಣಿತಿಯನ್ನು ಮಾಡಬೇಕು. ಒಕ್ಕಲಿಗರಲ್ಲದೆ, ಇಡೀ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಕೆಂಪೇಗೌಡರ ಪ್ರತಿಮೆಗಳನ್ನು ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲು ಅಗತ್ಯ ನೆರವನ್ನು ರಾಜ್ಯ ಒಕ್ಕಲಿಗರ ಸಂಘ ನೀಡುತ್ತಾ ಬಂದಿದೆ. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಆರ್.ಹನುಮಂತರಾಯಪ್ಪ ಅವರ ಕೋರಿಕೆಯಂತೆ ಜಿ.ಜಿ.ಎಸ್.ವೃತ್ತದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಪುತ್ತಳಿ ಹಾಗೂ ಶ್ರೀಕೆಂಪೇಗೌಡ ಪ್ರತಿಮೆ ಆನಾವರಣಕ್ಕೆ ಅಗತ್ಯ ಒತ್ತಾಯವನ್ನು ಜಿಲ್ಲಾಡಳಿತಕ್ಕೆ ತರಲಾಗುವುದು ಎಂದರು.ಒಕ್ಕಲಿಗ ಸಮಾಜಕ್ಕಿದೆ ಎಚ್‌ಡಿಕೆ, ಡಿಕೆಶಿ ಕೊಡುಗೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರ ಕೊಡುಗೆಯೂ ಈ ಸಮಾಜಕ್ಕೆ ಇದೆ. ಹಾಗಾಗಿಯೇ ನೀವುಗಳ ಆಡುವ ಮಾತನ್ನು ಸಮಾಜ ಕೇಳುತ್ತಿದೆ. ಸಮಾಜಕ್ಕೆ ಅಗೌರವ ತರುವಂತಹ, ಮುಜುಗರ ಉಂಟು ಮಾಡುವಂತಹ ಮಾತುಗಳನ್ನು ಆಡಬೇಡಿ. ಸಮಾಜದ ಹೊರತಾಗಿ ನ್ಯಾವಾರು ಅಲ್ಲ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.ತುಮಕೂರು ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಆಡಳಿತ ಅಧಿಕಾರಿ ನೇಮಕವಾಗಿರುವುದು ತಲೆ ತಗ್ಗಿಸುವಂತಹ ವಿಚಾರವಾಗಿದೆ. ನಾನು ಎನ್ನದೆ ನಾವು ಎಂದರೆ ಎಲ್ಲವೂ ಸುಗಮ, ಒಳ್ಳೆಯ ಕೆಲಸ ಮಾಡುವವರ ಬೆನ್ನು ತಟ್ಟಬೇಕಿದೆ. ಈ ವರ್ಷ ಸಂಘದಲ್ಲಿ ಸದಸ್ಯರ ನೋಂದಣಿ ಶುಲ್ಕು ಸುಮಾರು 120 ಕೋಟಿ ರು.ಇದ್ದು. ಇದರಲ್ಲಿ ಬರುವ ಬಡ್ಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 5-10 ಎಕರೆ ಜಮೀನು ಖರೀದಿಸಿ, ವಿದ್ಯಾಸಂಸ್ಥೆಗಳ ತೆರೆಯಲು ಅಗತ್ಯ ಕ್ರಮವಹಿಸಲಾಗುತ್ತಿದೆ. ತುಮಕೂರು ನಗರದಲ್ಲಿ ಇರುವ ಸಿ.ಎ.ನಿವೇಶನದಲ್ಲಿ ಕಚೇರಿ ಕಟ್ಟಡ ಪ್ರಾರಂಭಕ್ಕೆ ಪ್ರಯತ್ನಿಸಲಾಗುವುದು ಎಂದರು.ರಾಜ್ಯ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಆರ್.ಹನುಮಂತರಾಯಪ್ಪ ಮಾತನಾಡಿದರು. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾನಿಧ್ಯವನ್ನು ಆದಿಚುಂಚಗಿರಿ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಕುಣಿಗಲ್‌ನನ ಅರೆ ಶಂಕರಮಠದ ಶ್ರೀಸಿದ್ದರಾಮಚೈತನ್ಯ ಸ್ವಾಮೀಜಿಗಲು ವಹಿಸಿದ್ದರು. ವೇದಿಕೆಯಲ್ಲಿ ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಆಶ್ವಥಕುಮಾರ್, ಮಾಜಿ ಶಾಸಕ ಎಚ್.ನಿಂಗಪ್ಪ,ಮುರುಳೀಧರ ಹಾಲಪ್ಪ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರಕಾಶ್, ಒಕ್ಕಲಿಗರ ಸಂಘದ ಕಾನೂನು ವಿಭಾಗದ ಅಧ್ಯಕ್ಷ ಡಿ.ಲೋಕೇಶ್ ನಾಗರಾಜಯ್ಯ, ಎಎಸ್ಪಿ ಮರಿಯಪ್ಪ, ಡಿಎಫ್‌ಓ ಅನುಪಮ, ಆರ್.ಎಫ್.ಓ ದೇವರಾಜು, ಡಾ.ಅಂಜನಪ್ಪ, ವೀರಕ್ಯಾತಯ್ಯ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ನಗರಸಭೆ ಮಾಜಿ ಅಧ್ಯಕ್ಷ ದೇವಿಕ ಸಿದ್ದಲಿಂಗೇಗೌಡ,ಮಾಜಿ ಉಪಮೇಯರ್ ಟಿ.ಆರ್.ನಾಗರಾಜು,ಪಾಲಿಕೆ ಮಾಜಿ ಸದಸ್ಯರಾದ ಜೆ.ಕುಮಾರ್, ಧರಣೇಂದ್ರಕುಮಾರ್, ಮನೋಹರಗೌಡ, ಶ್ರೀನಿವಾಸಮೂರ್ತಿ, ಎಂ.ಕೆ.ಮನು ಭಾಗವಹಿಸಿದ್ದರು.