ಸಾರಾಂಶ
ಬಳ್ಳಾರಿ: ಮನೆಯ ಹೊರಭಾಗದಲ್ಲಿ ಮಳೆ ನೀರು ನಿಲ್ಲುವ, ಬಿಸಾಡಿದ ಟೈರ್, ತಗಡಿನ್ ಟಿನ್, ಪ್ಲಾಸ್ಟಿಕ್ ಕಪ್ ಮತ್ತು ಹೂವಿನ ಕುಂಡಲುಗಳಲ್ಲಿ 7 ದಿನಗಳಿಗಿಂತ ಹೆಚ್ಚು ದಿನ ಸತತವಾಗಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ವಿಭಾಗ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಡಿಹಟ್ಟಿ ಸಹಯೋಗದಲ್ಲಿ ಡೆಂಘೀ ಹರಡುವ ಈಡೀಸ್ ಲಾರ್ವಾ ಸಮೀಕ್ಷಾ ಕಾರ್ಯವನ್ನು ಬಂಡಿಹಟ್ಟಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.ನೀರಿನಲ್ಲಿ ಉತ್ಪತ್ತಿಯಾಗುವ ಡೆಂಘೀ, ಚಿಕೂನ್ ಗುನ್ಯಾ ಹರಡುವ ಸೊಳ್ಳೆಯ ಮರಿ ಉತ್ಪತ್ತಿಯಾಗದಂತೆ ತಡೆಯುವ ಮೂಲಕ ರೋಗ ಹರಡದಂತೆ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಮನೆಯ ಬಳಕೆಗಾಗಿ ಸಂಗ್ರಹಿಸುವ ನೀರಿನಲ್ಲಿ ಮುಚ್ಚಳ ಮುಚ್ಚದೇ ಇದ್ದರೆ ಅಂತಹ ನೀರಿನಲ್ಲಿ ಮೊಟ್ಟೆಗಳನ್ನು ಇಟ್ಟು ಈಡೀಸ್ ಸೊಳ್ಳೆ ತನ್ನ ಸಂತತಿಯನ್ನು ವೃದ್ಧಿ ಮಾಡಿಕೊಳ್ಳುತ್ತದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಬೇಕು. ಸೊಳ್ಳೆ ಮರಿ ಉಂಟಾಗದಂತೆ ತಡೆಯಬೇಕು ಎಂದರು.ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಮಾತನಾಡಿ, ಮನೆ ಬಳಕೆಗಾಗಿ ಬಳಸುವ ನೀರನ್ನು ಡ್ರಮ್, ಬ್ಯಾರೆಲ್, ಸಿಮೆಂಟ್ ತೊಟ್ಟಿ ಮುಂತಾದವುಗಳಲ್ಲಿ ಸಂಗ್ರಹಿಸಿದಾಗ ಅವುಗಳಿಗೆ ಸರಿಯಾದ ಮುಚ್ಚಳ ಮುಚ್ಚದಿದ್ದಾಗ ಅಧಿಕ ಪ್ರಮಾಣದಲ್ಲಿ ನೀರು ಇದ್ದರೆ ಅಂತಹ ನೀರಿನಲ್ಲಿ ಆರೋಗ್ಯಕ್ಕೆ ಹಾನಿಕಾರವಲ್ಲದ ಕೇವಲ ಸೊಳ್ಳೆ ಮರಿಗಳನ್ನು ನಾಶ ಮಾಡುವ ಟೆಮಿಫಾಸ್ ದ್ರಾವಣವನ್ನು ತಮ್ಮ ಮನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಭೇಟಿ ನೀಡಿದಾಗ ಹಾಕಿಸುವುದರಿಂದ ಸೊಳ್ಳೆ ಉತ್ಪತ್ತಿ ತಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪನವರ, ಸಿಬ್ಬಂದಿ ಮಹಾಲಿಂಗ, ಶಾರದಾ, ಸುನಿತಾಬಾಯಿ, ಮುಮ್ತಾಜ್ ಬೇಗಂ, ಎಲ್‌ಡಿಸಿ ಪಾವರ್ತಿ ಸೇರಿದಂತೆ ಇತರರು ಇದ್ದರು.3ಬಿಆರ್‌ವೈ1
ಬಳ್ಳಾರಿಯ ಬಂಡಿಹಟ್ಟಿ ಪ್ರದೇಶದಲ್ಲಿ ಕೈಗೊಂಡಿರುವ ಡೆಂಘೀ ಹರಡುವ ಈಡೀಸ್ ಲಾರ್ವಾ ಸಮೀಕ್ಷಾ ಕಾರ್ಯವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದರು.