ಯಾವುದೇ ಔಷಧಿಯನ್ನು ವೈದ್ಯರ ಸಲಹೆ ಇಲ್ಲದೇ ಬಳಸಬಾರದು. ಅದರಿಂದ ಗುಣಮುಖವಾಗುವುದಕ್ಕಿಂತ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಬಹಳ ಇರುತ್ತದೆ.
ಮುಂಡಗೋಡ: ಅಲೋವೆರಾ, ಶುಂಠಿ, ತುಳಸಿ, ಬೇವು, ಅಮೃತ ಬಳ್ಳಿಯಂತಹ ಔಷಧಿಗಳನ್ನು ಬಳಸಿ ರೋಗದಿಂದ ದೂರ ಉಳಿಯಬಹುದು. ಅಗತ್ಯವಿದ್ದರೆ ಮಾತ್ರ ವೈದ್ಯರ ಬಳಿ ಹೋಗಬೇಕು ಎಂದು ಮುಂಡಗೋಡ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಯೋಗೇಶ್ ಮಡಗಾಂವಕರ್ ಹೇಳಿದರು.
ಬುಧವಾರ ತಾಲೂಕಿನ ಮರಗಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಮುಂಡಗೋಡ ಮತ್ತು ಗ್ರಾಮ ಅಭಿವೃದ್ದಿ ಸಮಿತಿ, ಮಹಿಳಾ ಸ್ವ- ಸಹಾಯ ಸಂಘಗಳು ಮರಗಡಿ ಹಾಗೂ ಲೊಯೋಲ ವಿಕಾಸ ಕೇಂದ್ರ ಮುಂಡಗೋಡ ಇವರ ಆಶ್ರಯದಲ್ಲಿ ಉಚಿತ ಕೀಲು ಮೂಳೆ ವ್ಯಾದಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಯಾವುದೇ ಔಷಧಿಯನ್ನು ವೈದ್ಯರ ಸಲಹೆ ಇಲ್ಲದೇ ಬಳಸಬಾರದು. ಅದರಿಂದ ಗುಣಮುಖವಾಗುವುದಕ್ಕಿಂತ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಬಹಳ ಇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ರೋಗಗಳ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಸೂಚನೆ ಪಡೆದು ಅದರ ಅನುಸಾರ ಔಷಧಿ ಸೇವನೆ ಮಾಡಿ ಎಂದು ಸಲಹೆ ನೀಡಿದರು.
ಡಾ. ಮಲ್ಲಿಕಾರ್ಜುನ, ಲೊಯೋಲ ವಿಕಾಸ ಕೇಂದ್ರದ ಕಾರ್ಯಕರ್ತ ಭರಮಣ್ಣ ಚಕ್ರಸಾಲಿ, ಭವಿಷ್ಯ ಭಾರತ ಸಂಸ್ಥೆಯ ಸಿಬ್ಬಂದಿ ಶಿವಾನಂದ ಮುಂತಾದವರು ಮಾತನಾಡಿದರು. ಜನವೇದಿಕೆ ನಾಯಕರಾದ ನಜರೀನ್ ಹುಲ್ಲತ್ತಿ, ರಾಜು ರಾವಳ, ಪರಮೇಶ್ವರ ರಾವಳ, ರಾಜೇಸಾಬ ಮೇಲಿಮನಿ, ಜಾಫರ್ ಗಾಂಜಿ, ರತ್ನವ್ವ ಗೊಲ್ಲರ, ತೇಜಸ್ವಿನಿ ಬೇಗೂರು ಸ್ವಾಗತಿಸಿ, ನಿರೂಪಿಸಿದರು. ನಕಲುಬಾಯಿ ಕೊಕರೆ ವಂದಿಸಿದರು.