ಸೂಲಿಬೆಲೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲ: ಪಟ್ಟದ್ದೇವರು

| Published : Feb 27 2024, 01:30 AM IST

ಸಾರಾಂಶ

ಪೀಠಾಧಿಪತಿಗಳಾದ ಗುರುಬಸವ ಪಟ್ಟದ್ದೇವರು ವೇದಿಕೆ ಹಂಚಿಕೊಳ್ಳುವದು ಸೂಕ್ತವಲ್ಲ ಎಂಬಿತ್ಯಾದಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು

ಕನ್ನಡಪ್ರಭ ವಾರ್ತೆ ಬೀದರ್‌

ನಮಗೆ ಕೇಳದೇ ಪೋಸ್ಟರ್‌ನಲ್ಲಿ ಹೆಸರು, ಭಾವಚಿತ್ರವನ್ನ ಹಾಕಲಾಗಿದೆ. ಈ ಬಗ್ಗೆ ಸಂಘಟಕರು ನಮ್ಮ ಬಳಿ ಬಂದು ಕ್ಷಮೆಯಾಚಿಸಿದ್ದಾರೆ. ನಾವು ಚಕ್ರವರ್ತಿ ಸೂಲಿಬೆಲೆ ಅವರ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುತ್ತಿಲ್ಲ. ಹೀಗೆ ಹೇಳಿದ್ದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಗುರುಬಸವ ಪಟ್ಟದ್ದೇವರು.

ಇದೇ ಫೆ.28ರಂದು ಭಾಲ್ಕಿಯ ಚನ್ನಬಸವಾಶ್ರಮದ ಮೈದಾನದಲ್ಲಿ ಯುವಾ ಬ್ರೀಗೇಡ್‌ನ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆಯಲಿರುವ ಈಗ ಶುರುವಾಗಿದೆ ಭಾರತದ ಕಾಲ, ಬಹಿರಂಗ ಸಮಾವೇಶದಲ್ಲಿ ಭಾಲ್ಕಿಯ ಹಿರಿ, ಕಿರಿಯ ಶ್ರೀಗಳಿಬ್ಬರೂ ಸಾನ್ನಿಧ್ಯವಹಿಸುತ್ತಿದ್ದಾರೆ ಎಂಬ ಪೋಸ್ಟರ್‌ ಜಿಲ್ಲೆಯ ಬಸವಾಭಿಮಾನಿಗಳಲ್ಲಿ ಬೇಸರ ತಂದಿತ್ತು.

ಸೂಲಿಬೆಲೆ ಅವರ ಕಾರ್ಯಕ್ರಮ ರಾಜಕೀಯ ಪ್ರೇರಿತವಾಗಿರುತ್ತವೆ. ಕೋಮುವಾದ ಹರಡುವ ಸಾಧ್ಯತೆಯಿದೆ. ಅಷ್ಟಕ್ಕೂ ಜೈ ಶ್ರೀರಾಮ್‌ ಘೋಷ ವಾಕ್ಯದೊಂದಿಗೆ ಇರುವ ಈ ಕಾರ್ಯಕ್ರಮದಲ್ಲಿ ಅಪ್ಪಟ ಬಸವ ತತ್ವ ಪಾಲಕರಾದ ಅನುಭವ ಮಂಟಪದ ಅಧ್ಯಕ್ಷರಾದ ಭಾಲ್ಕಿಯ ಹಿರಿಯ ಪೂಜ್ಯರಾದ ಬಸವಲಿಂಗ ಪಟ್ಟದ್ದೇವರು ಹಾಗೂ ಪೀಠಾಧಿಪತಿಗಳಾದ ಗುರುಬಸವ ಪಟ್ಟದ್ದೇವರು ವೇದಿಕೆ ಹಂಚಿಕೊಳ್ಳುವದು ಸೂಕ್ತವಲ್ಲ ಎಂಬಿತ್ಯಾದಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಹೀಗಾಗಿ ಈ ಕುರಿತಂತೆ ಕನ್ನಡಪ್ರಭಕ್ಕೆ ಮಾತನಾಡಿದ ಗುರುಬಸವ ಪಟ್ಟದ್ದೇವರು, ನಾವಿಬ್ಬರೂ ಬೆಂಗಳೂರಿನಲ್ಲಿ ಪೂರ್ವ ನಿಗದಿತ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡು ವಧು ವರರಿಗೆ ಹರಸಲು ಬೆಂಗಳೂರಿಗೆ ತೆರಳುತ್ತಿದ್ದು ಸೂಲಿಬೆಲೆ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವದಿಲ್ಲ. ಅಷ್ಟಕ್ಕೂ ನಮಗೆ ಗೊತ್ತಿಲ್ಲದೆ ಹೆಸರು ಬಳಸಲಾಗಿದೆ. ಇಲ್ಲಿನ ಚನ್ನಬಸವಾಶ್ರಮದ ಸ್ಥಳ ಎಲ್ಲರೂ ಬಳಸಬಹುದಾಗಿದೆ ಅದನ್ನು ನೋಡಿಕೊಳ್ಳುವ ವ್ಯವಸ್ಥಾಪಕರು ಆಯೋಜಕರ ಮನವಿಯಂತೆ ಸ್ಥಳ ಕಾಯ್ದಿರಿಸಿದ್ದಾರೆ. ಅದು ನನ್ನ ಗಮನಕ್ಕೂ ಬರೋಲ್ಲ ಎಂದು ಗುರುಬಸವ ಸ್ಪಷ್ಟಪಡಿಸಿದ್ದಾರೆ.