ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ರೈತರಿಗೆ ಖಾತೆ ಮಾಡಿಕೊಡಲು ವಿನಾಕಾರಣ ಅಲೆಸದೆ ಅವರ ದಾಖಲೆಗಳು ಕಾನೂನು ರೀತಿ ಸರಿಯಾಗಿ ಇದ್ದಲ್ಲಿ ತ್ವರಿತವಾಗಿ ಖಾತೆ ಮಾಡಿಕೊಡಿ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗು ಗ್ರಾಮ ಲೆಕ್ಕಾಧಿಕಾರಿಗಳಿಗೆ ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜನೆ ಮಾಡಿದ್ದ ಅಭಿಲೇಖಾಲಯದ ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಗಣಕೀಕರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಕಂದಾಯ ದಾಖಲೆಗಳ ಗಣಕೀಕರಣಗೊಳಿಸುವ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ರೈತರು ಪಡೆಯಬೇಕೆಂದರು.ಪ್ರಭಾರ ತಹಸೀಲ್ದಾರ್ ರಮೇಶ್ ಮಾತನಾಡಿ, ಭೂ ದಾಖಲೆಯಳ ಡಿಜಿಟಲೀಕರಣ ಉತ್ತಮ ಕಾರ್ಯವಾಗಿದ್ದು, ಪ್ರತಿಯೊಂದು ದಾಖಲೆ ಪತ್ರಗಳ ಸ್ಕ್ಯಾನಿಂಗ್ ಮಾಡುವ ಜತೆಗೆ ದಾಖಲಿಸಬೇಕು. ಪ್ರತಿಯೊಂದು ಕಡತಗಳನ್ನು ಗಣಕೀಕರಣಗೊಳಿಸಿ, ಪರಿಶೀಲನೆ ನಡೆಸಿ, ನಂತರ ಅಪ್ ಲೋಡ್ ಮಾಡಬೇಕು. ಪ್ರತಿಯೊಂದು ದಾಖಲೆಯನ್ನು ಈ ರೀತಿ ಮಾಡಬೇಕಾದ ಕಾರಣ ಹೆಚ್ಚು ಸಮಯಾವಕಾಶ ಬೇಕಿದೆ. ಈ ಕಾರ್ಯ ಸಂಪೂರ್ಣಗೊಂಡ ನಂತರದ ದಿನಗಳಲ್ಲಿ ದಾಖಲೆಗಳು ಶಾಶ್ವತವಾಗಿ ಸುಭದ್ರವಾಗಿ ಇಡಬಹುದು ಜತೆಗೆ ಕದಿಯಲು ಅಥವಾ ತಿದ್ದಲು ಅಥವಾ ಕಳೆಯಲು ಅಸಾಧ್ಯವಾಗುತ್ತದೆ, ತಂತ್ರಜ್ಞಾನದಿಂದ ನಿಮ್ಮ ಕೈಗೆ ಶಕ್ತಿ ಹಾಗೂ ನೇರ ಸುಲಭ ಲಭ್ಯತೆ ಇರುತ್ತದೆ ಮತ್ತು ತ್ವರಿತ ಸರಳ ಆಡಳಿತ ಸೇವೆಯನ್ನು ಒದಗಿಸುವ ಪ್ರಯತ್ನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಶಿರಸ್ತೇದಾರ್ ಲೋಕೇಶ್ ಇದ್ದರು.