ಸಾರಾಂಶ
ಅಧಿಕಾರಿಗಳು ತಮ್ಮ ಅಧಿಕಾರದ ದರ್ಪ ತೋರದೆ ಸಾರ್ವಜನಿಕರ ಜೊತೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವ ಮೂಲಕ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬ ಮಾಡದೆ ಮಾಡಿಕೊಡಬೇಕೆಂದು ಕೇಂದ್ರ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಅಧಿಕಾರಿಗಳು ತಮ್ಮ ಅಧಿಕಾರದ ದರ್ಪ ತೋರದೆ ಸಾರ್ವಜನಿಕರ ಜೊತೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವ ಮೂಲಕ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬ ಮಾಡದೆ ಮಾಡಿಕೊಡಬೇಕೆಂದು ಕೇಂದ್ರ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ತಿಳಿಸಿದರು. ತಾಲೂಕಿನ ನೊಣವಿನಕೆರೆಯ ರಂಗಮಂದಿರದಲ್ಲಿ ಶನಿವಾರ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಾರ್ವಜನಿಕರಿಂದ ಗ್ರಾಮ ಪಂಚಾಯಿತಿಗಳ ಪಿಡಿಓಗಳ ಮೇಲೆ ಹೆಚ್ಚು ದೂರುಗಳು ಬರುತ್ತಿವೆ. ಇ- ಖಾತೆ ಸೇರಿದಂತೆ ಇತರೆ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಬಗ್ಗೆ ಹೆಚ್ಚು ಅಲೆದಾಡಿಸುತ್ತಿರುವ ಜೊತೆಗೆ ಭ್ರಷ್ಟಾಚಾರಗಳ ಬಗ್ಗೆಯೂ ದೂರುಗಳಿದ್ದು ತಿದ್ದಿಕೊಳ್ಳಲು ತಿಳಿಸಿದರು. ನಾನು ಚುನಾವಣೆಯನ್ನು ಎದುರಿಸುವಾಗ ಮಾತ್ರ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಗೆದ್ದು ಕೇಂದ್ರ ಸರಕಾರದಲ್ಲಿ ಮಂತ್ರಿಯಾದ ನಂತರ ಸರಕಾರದ ಭಾಗವಾಗಿ ಪಕ್ಷಾತೀತವಾಗಿ ಜನರ ಕೆಲಸ ಮಾಡುತ್ತೇನೆ. ಯಾರು ಯಾವ ಪಕ್ಷದವರು ಎಂಬುದನ್ನು ನೋಡದೆ ಕೇಂದ್ರದ ಮೋದಿ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ ಎಂದರು. ನೊಣವಿನಕರೆಯ ಜನಸಂಪರ್ಕ ಸಭೆಗೆ ಪ್ರಾರಂಭದಲ್ಲಿ ಹೆಚ್ಚು ಜನರಿಲ್ಲದ ಕಾರಣ ಬೇಸರಗೊಂಡ ಸಚಿವ ಸೋಮಣ್ಣ ಜನರು ಕಡಿಮೆ ಬರಲು ಕಾಣದ ಕೈಗಳ ಕೈವಾಡವಿದೆ. ಸಭೆಯ ಕುರಿತು ಪ್ರಚಾರ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ. ನಾನು ಯಾವುದಕ್ಕೂ ಜಗ್ಗುವವನಲ್ಲ. ನಾನು ಜನರ ಮನೆಗೆ ತೆರಳಿ ಕೆಲಸ ಮಾಡಲು ಸಿದ್ದನಿದ್ದೇನೆ ಎಂದರು.ತಿಪಟೂರಿನಿಂದ ರಂಗಾಪುರಕ್ಕೆ ತೆರಳಲು ಗಾಂಧಿನಗರದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ವೇ ಕಾರ್ಯ ಪ್ರಾರಂಭಿಸಲಾಗಿದ್ದು ಅದಕ್ಕೆ ರಾಜಕೀಯವಾಗಿ ಕೆಲವರು ತಡೆ ಒಡ್ಡುತ್ತಿದ್ದು ಅದನ್ನು ಶೀಘ್ರದಲ್ಲಿಯೇ ನಿವಾರಿಸಲಾಗುವುದು. ಜಿಲ್ಲೆಯಲ್ಲಿ ೨೧ ರೈಲ್ವೆ ಕ್ರಾಸಿಂಗ್‌ಗಳಿಗೆ ಮೇಲ್‌ಸೇತುವೆ ನಿರ್ಮಿಸಲು ಗುರುತಿಸಲಾಗಿದ್ದು, ೩ ಕಾರ್ಯಾರಂಭ ಮಾಡಿದ್ದು ಇನ್ನುಳಿದವು ಟೆಂಡರ್ ಆಗಿದೆ ಎಂದರು. ರೈಲ್ವೆ ಇಲಾಖೆಗೆ ಸಂಬಂದಿಸಿದಂತೆ ರಾಜ್ಯದಲ್ಲಿ ಸುಮಾರು ೨೯ಸಾವಿರ ಕೋಟಿ ರು.ಗಳ ವೆಚ್ಚದಲ್ಲಿ ಹಲವಾರು ಯೋಜನೆಗಳು ನಡೆಯುತ್ತಿವೆ. ದೇಶಾದ್ಯಂತ ೫೫ ಸಾವಿರ ಕೋಟಿ ರು.ಗಳ ವೆಚ್ಚದಲ್ಲಿ ಗ್ರೀನ್ ಫೀಲ್ಡ್ ಕಾರಿಡಾರ್ ಯೋಜನೆ ಜಾರಿಯಾಗುತ್ತಿದೆ. ಈ ಗ್ರೀನ್ ಕಾರಿಡಾರ್ ಯೋಜನೆಯಲ್ಲಿ ಹಾಸನ ಹಿರಿಯೂರು ಹೆದ್ದಾರಿಯೂ ಸೇರಿದ್ದು ತಿಪಟೂರು ಮೂಲಕ ಹಾದುಹೋಗುತ್ತದೆ ಎಂದು ತಿಳಿಸಿದರು. ಜನಸ್ಪಂದನ ಕಾರ್ಯಕ್ರಮಕ್ಕೆ ಇ-ಸ್ವತ್ತು, ಪಾವತಿ ಖಾತೆ, ಅಂಗವಿಕಲರ ಮಾಸಾಶನ, ಉದ್ಯೋಗ ವಿಚಾರಕ್ಕೆ ಸಂಬಂಧಪಟ್ಟಂತೆ ಅತಿಹೆಚ್ಚು ಮನವಿಗಳು ಸಲ್ಲಿಕೆಯಾದವು. ತಹಸೀಲ್ದಾರ್ ಪವನ್‌ಕುಮಾರ್, ತಾಲೂಕು ಪಂಚಾಯಿತಿ ಇಒ ಸುದರ್ಶನ್, ನೊಣವಿನಕೆರೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕಮಲಮ್ಮ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಜೆಡಿಎಸ್ ಮುಖಂಡರಾದ ರಾಕೇಶ್ ಇನ್ನಿತರರು ಉಪಸ್ಥಿತರಿದ್ದರು. ಸಭೆಯ ನಂತರ ಸಚಿವ ಸೋಮಣ್ಣ ಕಾಡಸಿದ್ದೇಶ್ವರ ಮಠಕ್ಕೆ ಭೇಟಿನೀಡಿ ಶ್ರೀಗಳ ದರ್ಶನಾಶೀರ್ವಾದ ಪಡೆದರು.ಕೋಟ್೧: ರೈಲ್ವೆ ಇಲಾಖೆ ಸೇರಲು ನಡೆಸುವ ಪರೀಕ್ಷೆಯಲ್ಲಿ ಸ್ಥಳೀಯ ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಇರಲಿಲ್ಲ. ಈಗ ನಾನು ಸಚಿವನಾದ ಮೇಲೆ ಕನ್ನಡ ಭಾಷೆಯಲ್ಲೂ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿದ್ದೇನೆ. ರಾಜ್ಯದ ಜನರು ನಿರಾಸಕ್ತಿ ತೋರದೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. - ವಿ.ಸೋಮಣ್ಣ. ಕೇಂದ್ರ ಸಚಿವ.ಬಾಕ್ಸ್೨: ಜನಸಂಪರ್ಕ ಸಭೆಯಲ್ಲಿ ಸಚಿವರಿಗೆ ದೂರು ನೀಡಿದ ಗುಂಗುರುಮಳೆ ಗ್ರಾಮದ ನಂದಿನಿ ಕಳೆದ ೫ ವರ್ಷದಿಂದ ಇ-ಖಾತಾ ಮಾಡಿಕೊಡಲು ಪಿಡಿಒ ಉಮಾಮಹೇಶ್ ಸತಾಯಿಸುತ್ತಿದ್ದು ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ ಎಂದು ದೂರಿದರು. ಸ್ಪಂದಿಸಿದ ಸಚಿವರು ಪಿಡಿಒ ಉಮಾಮಹೇಶ್‌ರನ್ನು ತರಾಟೆ ತೆಗೆದುಕೊಂಡು ಜನರ ಕೆಲಸವನ್ನು ಮಾಡಿಕೊಡಲು ಸೂಚಿಸಿ, ಕೆಲಸ ಮಾಡದೇ ಹೋದರೆ ನಾನಿರುವ ಸ್ಥಳಕ್ಕೇ ನಿಮ್ಮನ್ನು ಕರೆಸಿಕೊಳ್ಳುವುದು ಗೊತ್ತಿದೆ ಎಂದು ಎಚ್ಚರಿಸಿದರು.ಬಾಕ್ಸ್೩: ನೊಣವಿನಕೆರೆಯಲ್ಲಿರುವ ಗೋಮಾಳವನ್ನು ಅಭಿವೃದ್ಧಿಪಡಿಸಿ ಇಂಡಸ್ಟ್ರಿಯಲ್ ಏರಿಯಾ ಆಗಿ ಪರಿವರ್ತಿಸಿದರೆ ಸ್ಥಳೀಯವಾಗಿ ಉದ್ಯೋಗಗಳು ಸೃಷ್ಠಿಯಾಗುತ್ತವೆ ಎಂದು ಸ್ಥಳೀಯರಿಬ್ಬರು ಮನವಿ ಸಲ್ಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು ರೈತನ ಮಗನಾದ ನಾನು ಈ ಕೆಲಸ ಮಾಡಲ್ಲ ಎಂದು ತಿಳಿಸಿ ಹತ್ತಿರದಲ್ಲಿ ೫೦ರಿಂದ ೧೦೦ ಎಕರೆ ಜಾಗ ಇದ್ದರೆ ನೋಡಿ ಅಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡಲು ನಾನು ನೆರವು ನೀಡುತ್ತೇನೆ ಎಂದು ತಹಸೀಲ್ದಾರ್‌ರವರಿಗೆ ಸೂಚಿಸಿದರು.