ಸಾರಾಂಶ
ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಬುಧವಾರ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಾರ್ವಜನಿಕರೊಂದಿಗೆ ಸಕರಾತ್ಮಕವಾಗಿ ಸ್ಪಂದಿಸಿ ಅವರ ಕೆಲಸಗಳನ್ನು ಕಾನೂನು ಚೌಕಟ್ಟಿನಲ್ಲಿ ಯಾವುದೇ ವಿಳಂಬ ಮಾಡದೆ ಮಾಡಿಕೊಡಲು ಸ್ಪಷ್ಟ ನಿರ್ದೇಶನ ನೀಡಿದರು.
ಅಧಿಕಾರಿಗಳಿಗೆ ಸೂಚನೆ
ಆಲೂರು: ಜಿಲ್ಲಾಧಿಕಾರಿ ಸತ್ಯಭಾಮ ಬುಧವಾರ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಈ ವೇಳೆ ಮಾತನಾಡಿದ ಅವರು, ತಾಲೂಕು ಕಚೇರಿಗೆ ಹಾಜರಾಗುವ ಸಾರ್ವಜನಿಕರೊಂದಿಗೆ ಸಕರಾತ್ಮಕವಾಗಿ ಸ್ಪಂದಿಸಿ ಅವರ ಕೆಲಸಗಳನ್ನು ಕಾನೂನು ಚೌಕಟ್ಟಿನಲ್ಲಿ ಯಾವುದೇ ವಿಳಂಬ ಮಾಡದೆ ಮಾಡಿಕೊಡಲು ಸ್ಪಷ್ಟ ನಿರ್ದೇಶನ ನೀಡಿದರು. ತಾಲೂಕಿನ ಅಭಿವೃದ್ಧಿಗಾಗಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಜಿಲ್ಲಾಡಳಿತದಿಂದ ಸಹಕಾರ ನೀಡುತ್ತೇನೆ ಎಂದರು.
ಭೂಮಾಪನಾ ಇಲಾಖೆ ಕಚೇರಿಗೆ ಭೇಟಿ ನೀಡಿ, ವಿವಿಧ ಕಡತಗಳ ಪರಿಶೀಲನೆ, ಅಧಿಕಾರಿ-ಸಿಬ್ಬಂದಿ ಹಾಜರಾತಿ, ಕಾರ್ಯವೈಖರಿ ಕುರಿತು ಪರಿಶೀಲಿಸಿದ ಅವರು, ಇಲಾಖೆಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಚೇರಿಯಲ್ಲಿರುವ ದಾಖಲೆಗಳನ್ನು ಸುರಕ್ಷಿತವಾಗಿಡಬೇಕು. ಆಸ್ತಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಯಮಾನುಸಾರ ತ್ವರಿತ ವಿಲೇವಾರಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ವಸತಿ ನಿಲಯಗಳ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಯಾವುದೇ ಮೂಲ ಸೌಲಭ್ಯದ ಕೊರತೆಯಾಗದಂತೆ ಹಾಗೂ ಯಾವುದೇ ದೂರು ಬಾರದಂತೆ ನೋಡಿಕೊಳ್ಳಬೇಕು. ನಿಯಮಿತವಾಗಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುವಂತೆ ಸೂಚನೆ ನೀಡಿದರು.
ಸರ್ಕಾರದ ಮಹತ್ವಾಕಾಂಕ್ಷೆ ಅನ್ನಭಾಗ್ಯ ಯೋಜನೆಯ ಲಾಭ ಎಲ್ಲ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅರ್ಹ ಫಲಾನುಭವಿಗಳ ಆಧಾರ್ ಜೋಡಣೆ ಇರುವ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಕ್ರಮ ವಹಿಸಿ, ಅನ್ನಭಾಗ್ಯ ಯೋಜನೆ ಲಾಭ ದೊರಕಿಸಲು ನಿಯಮಾನುಸಾರ ದಾಖಲೆಗಳನ್ನು ಪರಿಶೀಲಿಸಿ ಕ್ರಮ ವಹಿಸಿ, ಅನ್ನಭಾಗ್ಯ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಯತ್ನಿಸಬೇಕು ಎಂದು ಸೂಚಿಸಿದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್, ತಾಲೂಕು ಕಚೇರಿ ಶಿರಸ್ತೇದಾರ್ ಆಶೋಕ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲೇಶ್, ಎಇಇ ರವಿಕುಮಾರ್, ಎ.ಡಿ. ಕೇಶವಮೂರ್ತಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಫೋಟೋ: ಜಿಲ್ಲಾಧಿಕಾರಿ ಸತ್ಯಾಬಾಮ ಬುಧವಾರ ಅರೀಕೆರೆ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.