ಸಾರಾಂಶ
ದೇವದುರ್ಗ ತಾಲೂಕು ಯರಮರಸ್ ಗ್ರಾಮದ ಆರಾಧ್ಯದೈವ ವೀರಭದ್ರ ತಾತನವರ 37ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ದೇವದುರ್ಗ
ಮಠ ಮಾನ್ಯಗಳು ಭಕ್ತರ ಅನುಕೂಲಕ್ಕಾಗಿ ಸಮಾಜಮುಖಿಯಾಗಿ ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳಬೇಕು. ನಮ್ಮ ಸಮಾಜದ ಸಂಸ್ಕೃತಿ ಬೆಳೆಸುವ ಕೇಂದ್ರವಾಗಿ ಕೆಲಸ ಮಾಡಬೇಕಿದೆ ಎಂದು ನೀಲಗಲ್ ಗಣೇಕಲ್ ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಯರಮರಸ್ ಗ್ರಾಮದ ಆರಾಧ್ಯ ದೈವ ಶ್ರೀವೀರಭದ್ರ ತಾತನವರ 37ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ವಿವಿಧ ಮಠದ ಸ್ವಾಮೀಜಿಗಳ ಆಶೀರ್ವಾದ ಸಿಗಲಿದೆ. ಅಲ್ಲದೆ ದುಂದು ವೆಚ್ಚಗಳಿಗೆ ಕಡಿವಾಣ ಬೀಳಲಿದೆ. ಸಾಲದ ಭಾರ ಕಡಿಮೆಯಾಗಲಿದೆ. ಉಳ್ಳವರು, ಶ್ರೀಮಂತರ ಮಕ್ಕಳು ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ವಿವಾಹ ಮಹೋತ್ಸವ ಕಳೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದರು.
ಶ್ರೀಮಠದ ಚರಬಸವ ತಾತನವರು ಆಶೀರ್ವಚನ ನೀಡಿದರು. ಎರಡು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಬೆಳಗ್ಗೆ 6 ಗಂಟೆಗೆ ಶ್ರೀ ವೀರಭದ್ರ ತಾತನವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಗಣರಾದನೆ ಜರುಗಿತು. ನೀಲಗಲ್ ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಜಾಗಟಗಲ್ ಬೆಟ್ಟಪ್ಪ ತಾತ, ಮುಖಂಡರಾದ ಪಂಪನಗೌಡ, ಭೀಮನಗೌಡ ನಾಗಡದಿನ್ನಿ, ಕೈಲಾಸ ತಾತ, ಮಂತ್ರಜಾತಯ್ಯ ಸ್ವಾಮಿ, ವೈ.ಅಮರೇಶಗೌಡ, ನಾಗರಾಜಗೌಡ, ಬಸವರಾಜಪ್ಪಗೌಡ, ಶರಣಬಸವಗೌಡ, ಉಮೇಶಗೌಡ ನಾಗಡದಿನ್ನಿ, ಅಜ್ಜಪ್ಪಗೌಡ, ಶರಣಬಸವ ಪೊ.ಪಾ, ಚನ್ನಯ್ಯ ಸ್ವಾಮಿ, ಬಸವರಾಜ ಸ್ವಾಮಿ, ಗ್ರಾ.ಪಂ ಸದಸ್ಯ ಬಸ್ಸಣ್ಣ ಇತರರಿದ್ದರು.