ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿನ ವಿವಿಧ ತಳಿಯ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. ಈ ಸಲ ಹೆಚ್ಚಿನ ಪ್ರದೇಶದಲ್ಲಿ ರೈತರು ತೊಗರಿ, ಮೆಕ್ಕೆಜೋಳ ಹಾಗೂ ವಿವಿಧ ದ್ವಿದಳ ಧ್ಯಾನ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರೈತರು ಬಿತ್ತನೆಗೆ ಮುನ್ನ ತಪ್ಪದೇ ಬೀಜೋಪಚಾರ ಮಾಡಿ ಬಿತ್ತನೆಮಾಡಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ವಿಲಿಯಂ ರಾಜಶೇಖರ ಹೇಳಿದರು.ನಗರದ ಹೊರವಲಯದ ಹಿಟ್ನಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರಿಗಾಗಿ ವಿವಿಧ ಬೆಳೆಗಳ ಉತ್ಪಾದನೆ ತಾಂತ್ರಿಕತೆಗಳ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಡೀನ್ ಡಾ.ಎ.ಬೀಮಪ್ಪ ಮಾತನಾಡಿ, ಉತ್ತಮ ಬೀಜಗಳ ಆಯ್ಕೆ ಉತ್ತಮ ಇಳುವರಿಗೆ ತಳಹದಿ ಕಾರಣ ರೈತರು ತರಬೇತಿಯಲ್ಲಿ ಪಡೆದ ತಾಂತ್ರಿಕ ಜ್ಞಾನವನ್ನು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ರೈತರು ಬಿತ್ತನೆಗೂ ಮುನ್ನ ಜೈವಿಕ ಗೊಬ್ಬರಗಳಾದ ರೈಜೋಬಿಯಂ, ರಂಜಕ ಕರಗಿಸುವ ಅಣುಜೀವಿ ಗೊಬ್ಬರದಿಂದ ಬೀಜೋಪಚಾರ ಮಾಡಿದಲ್ಲಿ ವಾತಾವರಣದಲ್ಲಿರುವ ಸಾರಜನಕ, ರಂಜಕ ಗೊಬ್ಬರಗಳ ಸ್ಥಿರಿಕರಿಸಿ ಬೆಳೆಗಳಿಗೆ ಒದಗಿಸುವುದರಿಂದ ಗೊಬ್ಬರದಲ್ಲಿ ಉಳಿತಾಯವಾಗುತ್ತದೆ ಎಂದು ಹೇಳಿದರು.ಸಹ ಸಂಶೋಧನಾ ನಿರ್ದೇಶಕ ಡಾ.ಅಶೋಕ ಸಜ್ಜನ ಮಾತನಾಡಿ, ರೈತರು ಪ್ರಮಾಣೀಕೃತ ಬೀಜಗಳನ್ನು ಅಂಗೀಕೃತ ಸಂಸ್ಥೆಗಳಿಂದ ಖರೀದಿಸಬೇಕು. ಬೀಜಗಳ ಮೊಳಕೆ ಪರೀಕ್ಷೆ, ಬೀಜೋಪಚಾರ ಮಾಡಿ ಬಿತ್ತನೆ ಕೈಗೊಂಡಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುವುದು ಎಂದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ.ಬಾಲರಾಜ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರಿಗೆ ತರಬೇತಿ ಮುಖಾಂತರ ತಾಂತ್ರಿಕ ಸಲಹೆ ನೀಡಿ, ಕೇಂದ್ರದಿಂದ ರೈತರಿಗೆ ಆಯ್ದ ಹಣ್ಣಿನ ಸಸಿಗಳನ್ನು ಉಚಿತವಾಗಿ ವಿತರಿಸಿ ಅವುಗಳನ್ನು ನೆಟ್ಟು ಪೋಷಿಸುವಂತೆ ಸಲಹೆ ನೀಡಿದರು.ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಸ್.ಎಮ್. ವಸ್ತ್ರದ ರೈತರಿಗೆ ಬೀಜೋಪಚಾರ ಪ್ರಾತ್ಯಕ್ಷಿಕೆ ಮೂಲಕ ಪ್ರಾಯೋಗಿಕವಾಗಿ ವಿವರಿಸಿದರು. ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ವಿಜಯಲಕ್ಷ್ಮೀ ಚವ್ಹಾಣ, ಪಾರ್ವತಿ ಪಾಟೀಲ, ಪ್ರಶಾಂತ ಸಾನಿ, ಕೃಷಿ ಅಧಿಕಾರಿಗಳಾದ ಎಮ್.ಆರ್.ಮೈದರಗಿ, ಗೀತಾ ಬಜಂತ್ರಿ, ಫಾತಿಮಾಬಾನು ಸೇರಿದಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಿಬ್ಬಂದಿ ವರ್ಗ, ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಕೃಷಿ ಸಖಿಯರು ಭಾಗವಹಿಸಿದ್ದರು.