ಗಳಿಸಿದ್ದರಲ್ಲಿ ಸ್ವಲ್ಪ ಸಮಾಜ ಸೇವೆ ಮಾಡಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ

| Published : Jul 20 2024, 12:51 AM IST

ಗಳಿಸಿದ್ದರಲ್ಲಿ ಸ್ವಲ್ಪ ಸಮಾಜ ಸೇವೆ ಮಾಡಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರಟಗಿ ತಾಲೂಕಿನ ಹಾಲಸಮುದ್ರ ಗ್ರಾಮದಲ್ಲಿ ಶರಣಬಸವ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ, ಉದ್ಯಮಿ ಶರಣಬಸವ ಕಕ್ಕರಗೋಳ ಅವರ ಜನ್ಮದಿನದ ನಿಮಿತ್ತ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಉಚಿತ ನೋಟ್‌ಬುಕ್ ವಿತರಣೆ ಮಾಡಲಾಯಿತು.

ಕಾರಟಗಿ: ಸದಾ ದುಡಿಯಬೇಕು, ಗಳಿಸಬೇಕು ಎನ್ನುವ ಮನೋಭಾವನೆಯಲ್ಲಿ ಜೀವನದ ಬಹುಮುಖ್ಯವಾದ ವೇಳೆ ಕಳೆದುಕೊಳ್ಳುವವರು, ಗಳಿಸಿದ ಹಣದಲ್ಲಿ ಸಮಾಜ ಸೇವೆ ಮಾಡುವ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹಾಲಸಮುದ್ರ ಗ್ರಾಮದಲ್ಲಿ ಶರಣಬಸವ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ, ಉದ್ಯಮಿ ಶರಣಬಸವ ಕಕ್ಕರಗೋಳ ಅವರ ಜನ್ಮದಿನದ ನಿಮಿತ್ತ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಉಚಿತ ನೋಟ್‌ಬುಕ್ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾಜದ ಸೇವೆಯೇ ದೇವರ ಸೇವೆ. ಕಾಯಕನಿಷ್ಠೆಯಿಂದ ಜೀವನ ಪರ್ಯಂತ ದುಡಿಯಿರಿ. ಆ ದುಡಿದ ಹಣದಲ್ಲಿ ಒಂದಿಷ್ಟು ಸಮಾಜಕ್ಕೆ ಮೀಸಲಿಡಿ. ಎಲ್ಲರಲ್ಲಿಯೂ ದಾನ-ಧರ್ಮ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಂಡರೆ ಮಾತ್ರ ಈ ಸಮಾಜ ಸುಧಾರಣೆಯಾಗುತ್ತದೆ. ದಾನ, ಧರ್ಮ ಎನ್ನುವುದು ನಮ್ಮ ಹಳ್ಳಿಗಳಲ್ಲಿ ಇನ್ನೂ ಇದೆ. ನಿರ್ಗತಿಕರ, ಬಡವರ ಸೇವೆಯೇ ದೇವರ ಸೇವೆಯಾಗಿದೆ. ಸಮಾಜದ ಅಭಿವೃದ್ಧಿಗಾಗಿ ಸಲ್ಲಿಸುವ ಸೇವೆ ವ್ಯಕ್ತಿತ್ವವನ್ನು ಶ್ರೇಷ್ಠಗೊಳಿಸುತ್ತದೆ ಎಂದು ಶ್ರೀಗಳು ಹೇಳಿದರು.

ಸೇವೆಯೇ ಮಹಾಕಾಯಕ, ಸೇವಕರೇ ದೇವರು, ಸೇವೆ ಮಾಡುವ ಮೂಲಕ ದೇವರನ್ನು ಕಾಣಬಹುದು. ಸಮಾಜ ನನಗೇನು ಕೊಟ್ಟಿದೆ ಎಂಬುದಕ್ಕಿಂತ ಸಮಾಜಕ್ಕೆ ನನ್ನ ಕೊಡುಗೆ ಏನು ಎಂಬ ಬಗ್ಗೆ ಯೋಚಿಸುವುದು ಅಗತ್ಯವಾಗಿದೆ ಎಂದರು.

ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ೪೦ಕ್ಕೂ ಹೆಚ್ಚು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ತಮ್ಮ ಜನ್ಮದಿನದಂದು ಉಚಿತವಾಗಿ ನೋಟ್‌ಬುಕ್ ವಿತರಣೆ ಮಾಡಿರುವ ಬಳ್ಳಾರಿಯ ಯುವ ಉದ್ಯಮಿ ಶರಣಬಸವ ಕಕ್ಕರಗೋಳ ಅವರ ಕೆಲಸ ಶ್ಲಾಘನೀಯ. ಅವರ ಸಮಾಜಸೇವೆ ಇನ್ನಷ್ಟು ವಿಸ್ತರಣೆಯಾಗಲಿ ಎಂದು ಹಾರೈಸಿದರು.ಬೂದುಗುಂಪಾ, ತಿಮ್ಮಾಪುರ, ಯರಡೋಣಾ, ನಂದಹಳ್ಳಿ, ಕಕ್ಕರಗೋಳ, ಹಾಲಸಮುದ್ರ, ಈಳಿಗನೂರು, ಜಮಾಪುರ, ಉಳೇನೂರ, ಬೆನ್ನೂರು ಸರ್ಕಾರಿ ಶಾಲೆಗಳಿಗೆ ತೆರಳಿ ನೋಟ್‌ಬುಕ್‌ ವಿತರಣೆ ಮಾಡಲಾಯಿತು.

ಭೀಮಜ್ಜ ತಾತ, ಕಳಕನಗೌಡ, ಚನ್ನಬಸಪ್ಪ ಸುಂಕದ, ಶರಣೇಗೌಡ ಮಾಲಿಪಾಟೀಲ್, ಬೆನ್ನೂರು ಗ್ರಾಪಂ ಅಧ್ಯಕ್ಷ ಶರಣಪ್ಪ ಸಾಹುಕಾರ, ಗುರುಸಿದ್ದಪ್ಪ ಯರಕಲ್, ಶರಣಪ್ಪ ಶಿವಪೂಜೆ, ಶಿವಕುಮಾರ್, ಬಸವರಾಜ ಕಕ್ಕರಗೋಳ, ಅಮರೇಶ ಪಾಟೀಲ್, ಪಾಲಾಕ್ಷಪ್ಪ ಕೆಂಡದ್ ಇತರರಿದ್ದರು.